ಜಿಲ್ಲೆ

ಮೈಸೂರಿನ ನಟನ ರಂಗಶಾಲೆಯಲ್ಲಿ ಭಾನುವಾರ ‘ಉಷಾಹರಣ’ ನಾಟಕ ಪ್ರದರ್ಶನ

reportermys

ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಮಾ.21ರಂದು ಸಂಜೆ 6.30ಕ್ಕೆ ‘ಉಷಾಹರಣ’ ನಾಟಕ ಪ್ರದರ್ಶನಗೊಳ್ಳಲಿದೆ.

ಶಾಂತಕವಿ ರಚಿಸಿರುವ ಈ ನಾಟಕವನ್ನು ಡಾ.ಶ್ರೀಪಾದಭಟ್ ನಿರ್ದೇಶಿಸಿ, ಸಂಗೀತ ಸಂಯೋಜನೆ, ವಿನ್ಯಾಸ ಮಾಡಿದ್ದಾರೆ. ಕರ್ನಾಟಕದ ಮೊದಲ ನಾಟಕ ಕಂಪನಿ ಸಂಸ್ಥಾಪಕರು ಎನ್ನಲಾದ ಹಾವೇರಿಯ ಶಾಂತಕವಿಯ ಮೊದಲ ನಾಟಕ ಉಷಾಹರಣ. 1870ಕ್ಕೂ ಪೂರ್ವದಲ್ಲೇ ಈ ನಾಟಕ ಬರೆದ ಶಾಂತಕವಿಗಳು ಕನ್ನಡ ಪಾರಮ್ಯದ ವಿಚಾರದಲ್ಲಿ ಪ್ರಶ್ನಾತೀತ ಒಲವು ತಾಳಿದ್ದವರು.

ಆಗ ಕನ್ನಡದ ಮೇಲೆ ಮರಾಠಿ ನಾಟಕಗಳ ಆಕ್ರಮಣ ನಡೆದಿತ್ತು. ಈಗ ಇದೇ ಕನ್ನಡ ರಂಗಭೂಮಿ ಮೇಲೆ ಅಂದಿನದೇ ಪರಿಸ್ಥಿತಿಯ ಪುನರಾವರ್ತನೆಯೂ ಆಗಿದೆ. ಒಂದೂವರೆ ಶತಮಾನಕ್ಕಿಂತಲೂ ಹಳೆಯದಾದ ಈ ನಾಟಕ ಪ್ರಯೋಗಕ್ಕೆ ಎತ್ತಿಕೊಳ್ಳುವ ಮೂಲಕ ಕನ್ನಡ-ಕರ್ನಾಟಕ, ಭಾಷೆ, ರಂಗಭೂಮಿ ಕರಿತಾದ ಚರ್ಚೆ ಹುಟ್ಟು ಹಾಕುವ ಮಹತ್ವದ ಆಕಾಂಕ್ಷೆ ಈ ನಾಟಕದ್ದು.

ಉಷಾಹರಣದಲ್ಲಿ ಬಳಸಲಾದ ರಂಗತಂತ್ರ ಒಂದರ್ಥದಲ್ಲಿ ತಳಹದಿಯಿಂದ ರಂಗಭೂಮಿ ಕುರಿತು ಅರಿವು ಮೂಡಿಸುವ ರಂಗ ಪ್ರಯೋಗಗಳ ಆಧುನಿಕತೆ ಮುರಿದು ಕಟ್ಟುವ ಕೆಲಸ ಮಾಡಲಿದೆ. ಕನ್ನಡ ಭಾಷೆಯ ಇಂದಿನ ಸ್ಥಿತಿಗತಿಯ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ, ಚರ್ಚೆಗೆ ಹಚ್ಚುವ ಪ್ರಯತ್ನ ಈ ಪ್ರಯೋಗದ ಹಿಂದಿದೆ. ಯುದ್ಧ ಮತ್ತು ಪ್ರೀತಿಯ ಸಾರ್ವಕಾಲಿಕ ಮೌಲ್ಯವನ್ನು ಸಾರುವ ಈ ನಾಟಕ ಈ ಕಾರಣಕ್ಕಾಗಿ ಸಮಕಾಲೀನವಾಗಿದೆ.