ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯ ವಜ್ರ ಮಹೋತ್ಸವ ಕಾರ್ಯಕ್ರಮ ಸೆಪ್ಟೆಂಬರ್ 1ರಂದು ನಿಗದಿಯಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಪತಿ ಆಗಮಿಸುವ ಬಗ್ಗೆ ಅಧಿಕೃತ ಮಾಹಿತಿ ರಾಷ್ಟ್ರಪತಿ ಭವನದಿಂದ ಬಂದಿದೆ ಎಂದು ಆಯಿಷ್ ನಿರ್ದೇಶಕಿ ಎಂ.ಪುಷ್ಪವತಿ ಖಚಿತಪಡಿಸಿದ್ದಾರೆ. ಆಗಸ್ಟ್‌ನಲ್ಲೇ ಆಯಿಷ್‌ನ 60ನೇ ವಾರ್ಷಿಕೋತ್ಸವ ಇತ್ತು. ಆದರೆ, ರಾಷ್ಟ್ರಪತಿ ಅವರ ದಿನಾಂಕ ಈಗ ದೊರೆತಿರುವುದರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ದ್ರೌಪದಿ ಮುರ್ಮು ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ. ದೇಶದ ಪ್ರಥಮ ಪ್ರಜೆಯಾದ ಬಳಿಕ ಇವರು ಮೈಸೂರಿಗೆ ಬರುತ್ತಿರುವುದು ಇದು 2ನೇ ಸಲವಾಗಿದೆ. 2022ರಲ್ಲಿ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟನೆಗೆ ಆಗಮಿಸಿದ್ದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 155.49 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉತ್ಕೃಷ್ಟತಾ ಕೇಂದ್ರವನ್ನು 2022ರಂದು ಜೂ.20ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಿದ್ದರು. ಇದೀಗ ರಾಷ್ಟ್ರಪತಿ ಈ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಆಯಿಷ್ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಸಂಸ್ಥೆ. ಮಾನಸಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಪಕ್ಕದಲ್ಲಿರುವ 32 ಎಕರೆಗಳ ಹಚ್ಚ ಹಸಿರಿನ ಕ್ಯಾಂಪಸ್‌ನಲ್ಲಿ ನೆಲೆಗೊಂಡಿರುವ ಇದು ಏಷ್ಯಾ ಉಪಖಂಡದಲ್ಲೇ ವಿಶಿಷ್ಟ ಸಂಸ್ಥೆ. 1966ರಲ್ಲಿ ಸ್ಥಾಪನೆಯಾದ ಇದು ಸ್ವಾಯತ್ತತೆ ಹೊಂದಿದ್ದು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಕ್ಲಿನಿಕಲ್ ಕೇರ್ ಮತ್ತು ಸಂವಹನ ಅಸ್ವಸ್ಥತೆಗಳ ಕುರಿತು ಅಧ್ಯಯನ, ಚಿಕಿತ್ಸೆ, ಸಂಶೋಧನೆ ಮಾಡುವ ರಾಷ್ಟ್ರೀಯ ಪ್ರವರ್ತಕ ಸಂಸ್ಥೆಯಾಗಿದೆ. ಅತ್ಯಾಧುನಿಕ ಉಪಕರಣ,
ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಸಂಸ್ಥೆಯು ಸಂವಹನ ಅಸ್ವಸ್ಥತೆ ಹೊಂದಿರುವ ಎಲ್ಲ್ಲ ವಯೋಮಾನದವರಿಗೂ ಕ್ಲಿನಿಕಲ್ ಸೇವೆ ಒದಗಿಸುತ್ತದೆ. ಯಾವುದೇ ರೀತಿಯ ಸಂವಹನ ತೊಂದರೆಗಳಿಗಾಗಿ ಮಕ್ಕಳ, ವಯಸ್ಕರು, ವೃದ್ಧಾಪ್ಯ ಗುಂಪುಗಳಿಗೆ ಮೌಲ್ಯಮಾಪನ, ಪುನರ್ವಸತಿ ಸೇವೆ ಕಲ್ಪಿಸುತ್ತದೆ.
ಇದು ಂದು ಸ್ನಾತಕೋತ್ತರ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಈಗ ಡಿಪ್ಲೊಮಾದಿಂದ ಪಿಎಚ್.ಡಿವರೆಗೆ 18 ಶೈಕ್ಷಣಿಕ ಕಾರ್ಯಕ್ರಮ ಕಲಿಸುತ್ತಿದೆ. ಇದೀಗ ವಜ್ರಮಹೋತ್ಸವ ಸಂಭ್ರಮದಲ್ಲಿದೆ.