ಮೈಸೂರು: ನಗರದ 800 ಮನೆಗಳಿಗೆ ಪೈಪ್‌ಲೈನ್ ಮೂಲಕ ಗೃಹಬಳಕೆಯ ನೈಸರ್ಗಿಕ ಅನಿಲ ಪೂರೈಕೆ ಮಾಡಲಾಗುತ್ತಿದೆ ಎಂದು ಅನಿಲ ವಿತರಣಾ (ಸಿಜಿಡಿ) ಕಂಪನಿಯಾದ ಎಜಿ ಆ್ಯಂಡ್ ಪಿ ಪ್ರಥಮ್ ಪ್ರಾದೇಶಿಕ ಮುಖ್ಯಸ್ಥ ಅರುಣ್ ನಾಯಕ್ ಹೇಳಿದರು.
ಕಳೆದ ದಸರಾದಲ್ಲಿ ಮೈಸೂರಿನ ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ 10 ಸಾವಿರ ಮನೆಗಳಿಗೆ ಪ್ಲಂಬಿಂಗ್ ಮಾಡಲಾಗಿದೆ. ಈ ಪೈಕಿ ವಿಜಯನಗರ, ಕುವೆಂಪುನಗರದಲ್ಲಿ ಪೈಪ್ ಮೂಲಕ 800 ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರ ಪಾಲಿಕೆ 45 ಕಿ.ಮೀ. ಗ್ಯಾಸ್ ಪೈಪ್‌ಲೈನ್‌ಗೆ ಅನುಮತಿ ಕೊಟ್ಟಿದೆ. ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಪೈಪ್ ಮೂಲಕ ಗ್ಯಾಸ್ ಪೂರೈಕೆಗೆ ಪ್ರೋತ್ಸಾಹ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು. ನಗರದಲ್ಲಿ 2025ರೊಳಗೆ 35 ಸಾವಿರ ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ಪೂರೈಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಪೈಪ್‌ಲೈನ್ ಮೂಲಕ ಹೊಸ ಸಂಪರ್ಕಕ್ಕೆ 10 ಸಾವಿರ ರೂ. ನಿಗದಿ ಮಾಡಿರುವುದು ಗ್ರಾಹಕರಿಗೆ ಹೊರೆ ಆಗಲ್ಲ. 6 ಸಾವಿರ ರೂ. ಭದ್ರತಾ ಠೇವಣಿ ಆಗಿದ್ದು, ಅದನ್ನು ಮರಳಿ ಪಡೆಯಲು ಅವಕಾಶ ಇದೆ. ಕಂತಿನ ಮೂಲಕ ಪಾವತಿಸಲು ಅವಕಾಶ ನೀಡಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಮೈಸೂರಿನ ಹೆಬ್ಬಾಳ, ನಂಜನಗೂಡಿನಲ್ಲಿ ಸಿಎನ್‌ಐ ಘಟಕ ಇದೆ. ಹುಣಸೂರು ಮತ್ತು ಪಿರಿಯಾಪಟ್ಟಣ ನಗರಗಳಿಗೆ ಅನುಕೂಲವಾಗುವಂತೆ ಸಣ್ಣ ಘಟಕ ಸ್ಥಾಪನೆಗೆ ಆಲೋಚನೆ ಇದೆ ಎಂದು ತಿಳಿಸಿದರು.
ಎಜಿ ಆ್ಯಂಡ್ ಪಿ ಪ್ರಥಮ್ ಮಾರುಕಟ್ಟೆ ಮುಖ್ಯಸ್ಥ ನಿತಿನ್ ಹುಲಿಗೋಳ್ ಮಾತನಾಡಿ, ನಮ್ಮ ಕಂಪನಿಯಿಂದ 5 ರಾಜ್ಯಗಳ 35 ಜಿಲ್ಲೆಗಳಲ್ಲಿ ಪೈಪ್‌ಲೈನ್ ಮೂಲಕ ಗೃಹಬಳಕೆಯ ನೈಸರ್ಗಿಕ ಅನಿಲ್(ಸಿಎನ್‌ಜಿ) ಪೂರೈಕೆಗೆ ಅನುಮತಿ ದೊರೆತಿದೆ. ಮನೆಗಳು, ಹೋಟೆಲ್, ರೆಸ್ಟೋರೆಂಟ್ ನಂತರ ಕೈಗಾರಿಕೆ, ವಾಹನಗಳಿಗೂ ಸರಬರಾಜು ಮಾಡಲಾಗುವುದು ಎಂದರು.
ಸಿಎನ್‌ಜಿ ಬಳಸಿದರೆ ಎಲ್‌ಪಿಜಿಗಿಂತ ಶೇ.40, ಡೀಸೆಲ್‌ಗಿಂತ ಶೇ.30ರಷ್ಟು ಉಳಿತಾಯವಾಗಲಿದೆ. ಆರ್ಥಿಕವಾಗಿ ಲಾಭ ಪಡೆಯಬಹುದು. ಪರಿಸರ ಸ್ನೇಹಿಯಾಗಿದೆ. ಯಾವುದೇ ಅಪಾಯ ಇಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ 25 ಕಾರ್ಖಾನೆಗಳಿಗೆ ಸಿಎನ್‌ಜಿ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಸಿಎನ್‌ಜಿಗೆ ವಾಹನಗಳನ್ನು ಮಾರ್ಪಡಿಸಿಕೊಳ್ಳಲು ಕಾಂಚೀಪುರಂ ಮತ್ತು ಮೈಸೂರಿನಲ್ಲಿ ಘಟಕ ಆರಂಭಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂಪನಿಯ ಮೈಸೂರು ವಲಯ ಮುಖ್ಯಸ್ಥ ಮುಖ್ಯಸ್ಥ ಬ್ರಿಜೆಶ್ ಇದ್ದರು..