ಜಿಲ್ಲೆ

ಮೈಸೂರಿಗೆ ಆ.8 ರಂದು ತಲುಪಲಿದೆ ‘ಮೈಸೂರು ಚಲೋ’

ಮೈಸೂರು: ಮುಡಾ, ವಾಲ್ಮೀಕಿ ನಿಗಮ ಹಗರಣ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಯು ಆ.8 ರಂದು ಸಂಜೆ ನಗರವನ್ನು ಪ್ರವೇಶಿಸಲಿದೆ.

ಶುಕ್ರವಾರ ಬೆಳಗ್ಗೆ ಶ್ರೀರಂಗಪಟ್ಟಣದಿಂದ ಪಾದಯಾತ್ರೆಯಲ್ಲಿ ಹೊರಟು ಸಂಜೆ ಮುಡಾ ಆವರಣಕ್ಕೆ ಆಗಮಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಪಾದಯಾತ್ರೆ ಮುಕ್ತಾಯಗೊಂಡ ನಂತರ ‘ಮನೆ ಮಾದೇಗೌಡ’ ಖ್ಯಾತಿಯ ಮುಡಾ ಮಾಜಿ ಅಧ್ಯಕ್ಷ ಡಿ. ಮಾದೇಗೌಡ ಅವರ ಮನೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಡಿ.ಮಾದೇಗೌಡ ಅಧಿಕಾರಾವಧಿಯಲ್ಲಿ ನಗರದಲ್ಲಿ ಬಡಾವಣೆಗಳನ್ನು ನಿರ್ಮಿಸಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶಗಳನ್ನು ಹಂಚಿಕೆ ಮಾಡಿದ್ದರು.

‘ಮೈಸೂರು ಚಲೋ’ ಪಾದಯಾತ್ರೆಯು ಶುಕ್ರವಾರ ಸಂಜೆ ಮುಕ್ತಾಯಗೊಳ್ಳಲಿದ್ದು, ಶನಿವಾರ ಬೆಳಗ್ಗೆ 11ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ನಿರ್ಮಿಸಿದ ವೇದಿಕೆಯನ್ನೇ ಮೈಸೂರು ಚಲೋ ಸಮಾವೇಶಕ್ಕೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನ ಜನಾಂದೋಲನ ಸಮಾವೇಶದ ನಂತರ ಕಾಂಗ್ರೆಸ್ ನಾಯಕರುಗಳ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳ ಫ್ಲೆಕ್ಸ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.