ಜಿಲ್ಲೆ

ಮೈಸೂರಿಗೆ ಅಧ್ಯಯನ ಪೀಠ ವಾಪಸ್

ಚಾಮರಾಜನಗರ: ಹಲವರ ಹೋರಾಟದ ವಾಗಿ ಜಾನಪದ ಕಲೆಗಳ ತವರೂರು ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠ ಮೈಸೂರು ವಿಶ್ವ ವಿದ್ಯಾಲಯಕ್ಕೆ ವಾಪಸ್ಸಾಗಿದೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುವ ಶ್ರೀಮಂಟೇಸ್ವಾಮಿ ನೀಲಗಾರರ ಪರಂಪರೆಯ ಅಧ್ಯಯನ, ಸಂಶೋಧನೆ ನಡೆಸುವ ಉದ್ದೇಶದಿಂದ

ಈ ಭಾಗದ ನೀಲಗಾರರು, ಸಾಹಿತಿಗಳು, ಸಿಂಡಿಕೇಟ್ ಸದಸ್ಯರು ಹಾಗೂ ಅನೇಕ ಹೋರಾಟಗಾರರ ಪ್ರಯತ್ನವಾಗಿ ಮೈಸೂರು ವಿಶ್ವವಿದ್ಯಾನಿಲಯ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು 2021ರಲ್ಲಿ ಸ್ಥಾಪನೆ ಮಾಡಿತ್ತು. ಸರಕಾರ ಆರಂಭದಲ್ಲೇ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠಕ್ಕೆ 30 ಲಕ್ಷ ರೂ. ಅನುದಾನವನ್ನು ನೀಡಿತ್ತು. ಅದರಂತೆ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾರಂಭಮಾಡಲಾಯಿತು.

ಈ ವೇಳೆಯಲ್ಲಿ ಸಿಂಡಿಕೇಟ್ ಸದಸ್ಯರಾಗಿದ್ದ ಪ್ರದೀಪ್‌ಕುಮಾರ್ ದಿಕ್ಷೀತ್ ಅವರ ಶ್ರಮದ ಫಲವಾಗಿ ಶ್ರೀಮಂಟೇಸ್ವಾಮಿ, ಶ್ರೀಸಿದ್ದಪ್ಪಾಜಿ, ಶ್ರೀರಾಚಪ್ಪಾಜಿ ಅಧ್ಯಯನ ಪೀಠದಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಅಲ್ಲದೇ ತಂಬೂರಿ ಪದಗಳನ್ನು ಹಾಡುವ ಆಯ್ದ ನೀಲಗಾರರ ಜೀವನ ಸಾರವನ್ನು ಒಳಗೊಂಡ ‘ನಾವು ಕೂಗುವ ಕೂಗು’ ಪುಸ್ತಕವನ್ನು ಪೀಠದ ವತಿಯಿಂದ ಹೊರತರಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಚಾಮರಾಜನಗರ ವಿಶ್ವವಿದ್ಯಾನಿಲಯ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀಮಂಟೇಸ್ವಾಮಿ, ಶ್ರೀಸಿದ್ದಪ್ಪಾಜಿ, ಶ್ರೀರಾಚಪ್ಪಾಜಿ ಅಧ್ಯಯನ ಪೀಠದ ದಾಖಲಾತಿ ಮತ್ತು ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಪತ್ರಬರೆದಿದ್ದರು. ಅದರಂತೆ ಅಧ್ಯಯನ ಪೀಠ ಮೈಸೂರು ವಿಶ್ವವಿದ್ಯಾಲಯಕ್ಕೆ ವಾಪಸ್ಸಾಗಿದೆ. ಆದರೆ ಈ ಭಾಗದ ಸಾಹಿತಿಗಳು, ಹಿರಿಯ ಹೋರಾಟಗಾರರು, ನೀಲಗಾರ ಪರಂಪರೆಯವರು ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಉಳಿಸಿಕೊಳ್ಳುವ ಕೂಗು ಈಗಲೂ ಕೇಳಿಬರುತ್ತಿದೆ.

2021ರಲ್ಲಿ ಪ್ರಾರಂಭವಾದ ಪೀಠ:

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 20 ಕ್ಕಿಂತಲೂ ಹೆಚ್ಚು ಅಧ್ಯಯನ ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಶ್ರೀಮಂಟೇಸ್ವಾಮಿ ಸೇರಿದಂತೆ ಇತರ ಜಾನಪದ ಪವಾಡ ಪುರುಷರ ಬಗ್ಗೆ ಅವರ ಕಾವ್ಯಗಳ ಬಗ್ಗೆ ಹೊರಗಿನವರಿಗೆ ಇಂದಿಗೂ ಸಾಕಷ್ಟು ಕುತೂಹಲವಿದೆ. ಈ ಕಾರಣಕ್ಕೆ ಅವರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್‌ಕುಮಾರ್ ಅವರ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯ ಪ್ರದೀಪ್ ಕುಮಾರ್ ದಿಕ್ಷೀತ್ ಅವರ ಶ್ರಮದಿಂದ 2021ರಲ್ಲಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಯಿತು.

ಹಲವು ಕಾರ್ಯಕ್ರಮ ಆಯೋಜನೆ:

ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠ ಇದ್ದಾಗ, ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಂಬೂರಿ ಪದಗಳನ್ನು ಹಾಡುವ ಆಯ್ದ ನೀಲಗಾರರ ಜೀವನ ಸಾರವನ್ನು ಒಳಗೊಂಡ ‘ನಾವು ಕೂಗುವ ಕೂಗು’ ಪುಸ್ತಕವನ್ನು ವಿದ್ವಾಂಸರುಗಳಿಂದ ಬರೆಸಲಾಗಿತ್ತು. ಸುತ್ತೂರು ಶ್ರೀಗಳು ಈ ಕಾರ್ಯಕ್ಕೆ ನೆರವಾಗಿದ್ದರು. ಈ ಪುಸ್ತಕವನ್ನು ಅಧ್ಯಯನ ಪೀಠದಿಂದ ಹೊರತರಲಾಗಿತ್ತು. ಅದಲ್ಲದೇ ನೀಲಗಾರರ ಕುರಿತಾದ ಹಲವಾರು ಪುಸ್ತಕಗಳನ್ನು ಸಂಗ್ರಹಣೆ ಮತ್ತು ಆ ಪರಂಪರೆಯ ಛಾಯಾಚಿತ್ರಗಳನ್ನು ಸಂಗ್ರಹ ಮಾಡಲಾಗಿತ್ತು. ಉಳಿದಂತೆ ಮತ್ತಷ್ಟು ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ ಇವೆಲ್ಲವೂ ಆಗುವ ಹೊತ್ತಿಗೆ ಮೈಸೂರು ವಿವಿಗೆ ಅಧ್ಯಯನ ಪೀಠ ವಾಪಸ್ಸಾಯಿತು.

ಇಂದಿಗೂ ಇಲ್ಲೇ ಉಳಿಸುವ ಕೂಗು:

ಈ ಭಾಗದ ಬಹುದೊಡ್ಡ ಜಾನಪದ ಪರಂಪರೆಯ ಮೂಲ ಪುರುಷರಾಗಿರುವ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಉಳಿಸಿಕೊಳ್ಳುವ ಕೂಗು ಇಂದಿಗೂ ಕೇಳಿಬರುತ್ತಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಶಂಕನಪುರ ಮಹಾದೇವ ಹಾಗೂ ಇನ್ನಿತರರು ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲೇ ಶ್ರೀಮಂಟೇಸ್ವಾಮಿ ಅಧ್ಯಯನ ಪೀಠ ಉಳಿಸಿಕೊಳ್ಳುವಂತೆ ಈ ಹಿಂದೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇತ್ತೀಚೆಗೆ ರಾಜ್ಯ ಸರ್ಕಾರ ಶ್ರೀಮಂಟೇಸ್ವಾಮಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಮುಂದಾಗಿದ್ದು, ಪೀಠವನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಾಗುವುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಮಂಟೇಸ್ವಾಮಿ ಅಧ್ಯಯನ ಪೀಠವನ್ನು ಚಾಮರಾಜನಗರದಲ್ಲೇ ಉಳಿಸುವಂತೆ ನಾನು ಸಹ ಪತ್ರ ಬರೆದಿದ್ದೇ, ಆದರೇ ನಾವೇ ನಡೆಸುತ್ತೇವೆ ಎಂದು ಮೈಸೂರು ವಿಶ್ವವಿದ್ಯಾಲಯದವರು ಉತ್ತರ ನೀಡಿದ್ದಾರೆ.

-ಪ್ರೊ.ಕೃಷ್ಣಮೂರ್ತಿ ಹನೂರು, ಸಂದರ್ಶಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಚಾಮರಾಜನಗರ ವಿಶ್ವವಿದ್ಯಾಲಯ