ಜಿಲ್ಲೆ

ಮೈಲಾರದಲ್ಲಿ ಕಾರ್ಣಿಕ ದಿನವೇ ಕಳಚಿ ಬಿದ್ದ ತ್ರಿಶೂಲ: ಅಪಶಕುನ ಸೂಚನೆ, ಭಕ್ತರ ಆತಂಕ


ಹೂವಿನಹಡಗಲಿ: ತಾಲೂಕಿನ ಮೈಲಾರದಲ್ಲಿ ಸೋಮವಾರ ಕಾರ್ಣಿಕೋತ್ಸವ ಮುನ್ನವೇ ದೇವಸ್ಥಾನದ ಶಿಬಾರದ ತ್ರಿಶೂಲ ಕಳಚಿ ಬಿದ್ದಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.

ದೇವಸ್ಥಾನದ ಮಹಾದ್ವಾರದ ಬಳಿ ಇರುವ ಶಿಬಾರಕ್ಕೆ ಜಾತ್ರೆ ನಿಮಿತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಬೆಳಗ್ಗೆ ಡೆಂಕಣಮರಡಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ಮೌನ ಸವಾರಿ ಮಾಡುವಾಗ ವಿದ್ಯುತ್ ತಂತಿ ಅಲುಗಾಡಿ ಶಿಬಾರ ಮೇಲಿನ ತ್ರಿಶೂಲನೆಲಕ್ಕೆ ಬಿದ್ದಿದೆ. ಇದರಿಂದ ಆತಂಕಗೊಂಡ ಭಕ್ತರು, ಜಾತ್ರೆಗೆ ಅಪಶಕುನ ಉಂಟಾಗಿದೆ. ಮುಂದೆ ಏನಾಗುತ್ತದೆಯೋ ಎಂದು ಭಯಗೊಂಡಿದ್ದಾರೆ.

ಶಿಬಾರದ ತ್ರಿಶೂಲ ಭಗ್ನವಾಗುತ್ತಿದಂತೆಯೇ ಸ್ಥಳೀಯ ಭಕ್ತರು ಧಾರ್ಮಿಕ ದತ್ತಿ ಇಲಾಖೆ ಇಒ ಗಂಗಾಧರಪ್ಪರನ್ನು ಭೇಟಿ ಮಾಡಿ, ಇದು ಅಪಶಕುನ. ಪ್ರತಿವರ್ಷದಂತೆ ಜಾತ್ರೆ ನಡೆಸಲು ಅವಕಾಶ ಕೊಡಬೇಕಿತ್ತು. ಅದಕ್ಕಾಗಿ ದೇವರು ಸಿಟ್ಟು ತೋರಿಸಿದ್ದಾನೆ. ಕಳಚಿ ಬಿದ್ದಿರುವ ತ್ರಿಶೂಲವನ್ನು ಸಂಪ್ರದಾಯದ ಪ್ರಕಾರ ಪ್ರತಿಷ್ಠಾಪನೆ ಮಾಡಬೇಕೆಂದು ಪಟ್ಟು ಹಿಡಿದರು. ಅದಕ್ಕೆ ಗಂಗಾಧರಪ್ಪ, ಇಲಾಖೆಯ ಆಗಮ ಪಂಡಿತರೊಂದಿಗೆ ಚರ್ಚಿಸಿ ಸಂಪ್ರದಾಯದಂತೆ ತ್ರಿಶೂಲ ಅಳವಡಿಸಲಾಗುವುದು ಎಂದು ತಿಳಿಸಿದರು.