ಜಿಲ್ಲೆ

ಮೈಲಾರ ಮಲ್ಲಣ್ಣ ಜಾತ್ರೆ ರದ್ದು

ಬೀದರ್: ಕೋವಿಡ್ ಸೋಂಕಿನ ಕಾರಣ ಡಿ. 20 ರಿಂದ ಜನವರಿ 20 ರವರೆಗೆ ನಡೆಯಲಿದ್ದ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನದ ಜಾತ್ರೆಯನ್ನು ರದ್ದುಪಡಿಸಲಾಗಿದೆ.

ಡಿಸೆಂಬರ್ 20, 27, ಜನವರಿ 3 ಹಾಗೂ 10 ರಂದು ಜಾತ್ರೆ ರದ್ದುಪಡಿಸಿ ದೇವಸ್ಥಾನದ ಆಡಳಿತಾಧಿಕಾರಿಯಾದ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಜಾತ್ರೆ ರದ್ದುಪಡಿಸಲಾದ ನಾಲ್ಕೂ ಭಾನುವಾರ ದೇವಸ್ಥಾನದ ಪರಿಸರದಲ್ಲಿನ ಕಾಯಂ ಹಾಗೂ ತಾತ್ಕಾಲಿಕ ಅಂಗಡಿಗಳನ್ನು ತೆರೆಯುವಂತಿಲ್ಲ. ಭಕ್ತರ ಓಡಾಟಕ್ಕೂ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾತ್ರ ಪಡೆಯಬಹುದಾಗಿದೆ ಎಂದು ದೇವಸ್ಥಾನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಕೋವಿಡ್ ಪ್ರಯುಕ್ತ ಈ ವರ್ಷ ಸಾಂಕೇತಿಕ ಆಚರಣೆ ಮಾತ್ರ ಇರಲಿದೆ. ಭಕ್ತರು ಸಹಕರಿಸಬೇಕು ಎಂದು ಕೋರಲಾಗಿದೆ.