ಜಿಲ್ಲೆ

ಮೈನವಿರೇಳಿಸಿದ ಕುಸ್ತಿ ಪಂದ್ಯ

ವಿಜಯವಾಣಿ ಸುದ್ದಿಜಾಲ ಆನೇಕಲ್
ಇಂಡ್ಲವಾಡಿಯಲ್ಲಿ ಗ್ರಾಮದೇವತಾ ಚಾರಿಟಬಲ್ ಟ್ರಸ್ಟ್‌ನಿಂದ ನವರಾತ್ರಿ ಉತ್ಸವ ಆಯೋಜಿಸಲಾಗಿತ್ತು.
ಗ್ರಾಮದ ವಿವಿಧ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಾನುವಾರ ಕುಸ್ತಿ ಪಂದ್ಯ ವೀಕ್ಷಿಸಲು ಸುತ್ತಮುತ್ತ ಗ್ರಾಮಗಳ ಜನರು ಜಮಾಯಿಸಿದ್ದರು. ಕನಕಪುರ, ಬೆಂಗಳೂರು, ಮಳವಳ್ಳಿ, ಮೈಸೂರು, ಮಾಗಡಿ, ತುಮಕೂರು, ಮಂಡ್ಯ, ರಾಮನಗರ ಸೇರಿ ವಿವಿಧೆಡೆಯಿಂದ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಂಡ್ಲವಾಡಿ ಗ್ರಾಪಂ ಮುಂಭಾಗದ ಬಯಲಿನಲ್ಲಿ ಮಣ್ಣಿನ ಅಖಾಡದಲ್ಲಿ ಪೈಲ್ವಾನರು ಸಾಮರ್ಥ್ಯ ಪ್ರದರ್ಶಿಸಿದರು. ಮೈಯಿಗೆ ಮಣ್ಣನ್ನು ಬಳಿದುಕೊಂಡು ಎದುರಾಳಿಯನ್ನು ಹಣಿಯಲು ಸಜ್ಜಾಗಿದ್ದು ಗಮನಸೆಳೆಯಿತು. ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಪ್ರೋತ್ಸಾಹಿಸಿದರು. ಕುಸ್ತಿ ಪ್ರದರ್ಶನದಲ್ಲಿ ಕುಸ್ತಿಪಟುಗಳು, ವಿವಿಧ ಗರಡಿ ಮನೆಗಳ ಪೈಲ್ವಾನ್‌ರನ್ನು ಸನ್ಮಾನಿಸಲಾಯಿತು.

ದೊಣ್ಣೆವರಸೆ: ಇಂಡ್ಲವಾಡಿ ಯಲ್ಲಿ ಗ್ರಾಮದೇವತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೋಲಾಟ, ರಸಮಂಜರಿ, ಭಕ್ತಿಗೀತೆಗಳ ಗಾಯನ, ಕುಸ್ತಿ ಪ್ರದರ್ಶನ ನಡೆದಿದ್ದು, ಅ.7ರಂದು ಭಕ್ತಿಸುಧೆ, 8ರಂದು ಕುಟುಂಬ ವಿಚಾರ ಸಂಕೀರ್ಣ ನಡೆಯಿತು. 9ರಂದು ದೊಣ್ಣೆವರಸೆ ಮತ್ತು ಪಂಜಿನ ಕವಾಯತು, 10ರಂದು ನೃತ್ಯ ಪದರ್ಶನ, 11ರಂದು ಭಜನಾ ಕಾರ್ಯಕ್ರಮ ಮತ್ತು 12ರಂದು ಪಲ್ಲಕ್ಕಿ ಉತ್ಸವ ನಡೆಯಲಿದೆ.