ಜಿಲ್ಲೆ

ಮೈತ್ರಿಯಿಂದ ಕಾನೂನು ಹೋರಾಟ ನಿಲ್ಲಿಸಲ್ಲ: ಜೆ ದೇವರಾಜೇಗೌಡ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದು, ಇನ್ನೇನು ಸುಪ್ರೀಂ ಕೋರ್ಟಿನಲ್ಲಿ ತೀರ್ಪು ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಜೆ ದೇವರಾಜೇಗೌಡ ಎಂಬ ಅನುಮಾನ ವ್ಯಕ್ತಪಡಿಸಿದರು.
ಮೈತ್ರಿ ವಿಚಾರವೇ ಬೇರೆ,ನನ್ನ ಕಾನೂನು ಹೋರಾಟವೇ ಬೇರೆ. ನನಗೆ ನಮ್ಮ ಪಕ್ಷದ ಯಾವ ಮುಖಂಡರು ಕೂಡ ಕಾನೂನು ಹೋರಾಟವನ್ನು ನಿಲ್ಲಿಸಿ ಎಂದು ಸೂಚನೆ ನೀಡಿಲ್ಲ. ಒಂದು ವೇಳೆ ಅಂತಹ ಸೂಚನೆ ಕೊಟ್ಟರು ನನ್ನ ಕಾನೂನು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಅವರಿಗೆ ತಾತ್ಕಾಲಿಕವಾಗಿ ತಡೆ ಸಿಕ್ಕಿದೆ, ಶೀಘ್ರದಲ್ಲೇ ಅಂತಿಮ ತೀರ್ಪು ಹೊರಬೀಳಲಿದೆ. ಇದಲ್ಲದೆ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಸುಪುತ್ರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಚುನಾವಣೆಗೆ ಸಂಬಂಧಿಸಿದಂತೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದು, ಈ ವಿಚಾರಣೆಯು ಕೂಡ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ಮೈತ್ರಿ ವಿಚಾರ ಹೈಕಮಾಂಟಿಗೆ ಬಿಟ್ಟಿದ್ದು, ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಬದ್ಧರಾಗಿರುತ್ತೇವೆ. ಜಿಲ್ಲೆಯನ್ನ ಬಿಜೆಪಿಗೆ ಬಿಟ್ಟುಕೊಡುವಂತೆ ಮನವಿ ಮಾಡಲಾಗುವುದು. ಒಂದು ವೇಳೆ ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಿದರೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ ಆದರೆ ಅವರನ್ನು ಬಿಟ್ಟು ಬೇರೆ ಯಾರೇ ಸ್ಪರ್ಧೆ ಮಾಡಿದರು ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಂದರು.
ಸಾರ್ವಜನಿಕರಲ್ಲಿ ಮೈತ್ರಿ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲಗಳು ಆರಂಭವಾಗಿದೆ. ನಾನು ವಕೀಲನಾಗಿ ಕಾನೂನು ಹೋರಾಟ ಮಾಡುತ್ತಿದ್ದೇನೆ, ಒಂದು ವೇಳೆ ಪಕ್ಷ ಕಾನೂನು ಹೋರಾಟದಿಂದ ಹಿಂದೆ ಸರಿಯುವಂತೆ ಒತ್ತಾಡ ಹಾಕಿದ್ದಾರೆ ನಾನು ವಕೀಲ ವೃತ್ತಿಯನ್ನು ಮಾಡುತ್ತೇನೆ ಹೊರತು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.