protest 
ಜಿಲ್ಲೆ

ಮೈತ್ರಿಯಲ್ಲಿ ರಾಜಕೀಯ ಗುದ್ದಾಟ!

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಮಧುರೆ

ಕೇಂದ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ತೊಡೆತಟ್ಟುತ್ತಿದೆ. ಆದರೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್‌ನಲ್ಲಿ ಬಿರುಕು ಮೂಡುವ ಸಂದರ್ಭಗಳು ಎದುರಾಗಿದ್ದು, ತಾಲೂಕಿನಲ್ಲಿ ಶಾಸಕ ಧೀರಜ್ ಮುನಿರಾಜ್ ವಿರುದ್ಧ ಜೆಡಿಎಎಸ್ ರಾಜ್ಯ ಪ್ರಧಾನ ಕಾರ್ಯದರ್ಶಇ ಹರೀಶ್‌ಗೌಡ ರಾಜಕೀಯ ಗುದ್ದಾಟ ನಡೆಸುತ್ತಿರುವುದು ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಮಧುರೆ ಹೋಬಳಿ ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಗುದ್ದಾಟ ನಡೆದಿರುವ ನಡುವೆಯೇ ಜೆಡಿಎಸ್ ಪ್ರಮುಖರು ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರುತ್ತಿರುವುದು ಮೈತ್ರಿ ಧರ್ಮ ಹಳಿತಪ್ಪುತ್ತಿದೆಯೇ ಎಂಬ ಗುಸುಗುಸು ಆರಂಭವಾಗಿದೆ.

ಲಿತಾಂಶಕ್ಕೆ ಜಿದ್ದಾಜಿದ್ದಿ: ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಶನಿವಾರ ನಿಗದಿಯಾಗಿತ್ತು. ಚುನಾವಣಾ ಫಲಿತಾಂಶಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ತೀವ್ರ ಗುದ್ದಾಟ ನಡೆದಿತ್ತು. ಫಲಿತಾಂಶ ಪ್ರಕಟವಾಗಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರೆ, ಫಲಿತಾಂಶ ೋಷಿಸಲೇಬೇಕು ಎಂದು ಬಿಜೆಪಿ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘದ ಮುಂದೆ ಬಿಗುವಿನ ವಾತಾವರಣ ಸೃಷ್ಠಿಯಾಗಿ, ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ನಡೆಸಿದ್ದರು. ಫಲಿತಾಂಶ ಪ್ರಕಟಿಸುವಂತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಸಂಘದ ಕಚೇರಿ ಮುಂದೆ ಪ್ರತಿಭಟನೆ ಕುಳಿತಿದ್ದರು. ಕಡೆಗೆ ನ್ಯಾಯಾಲಯದ ಆದೇಶದಂತೆ ಲಿತಾಂಶ ತಡೆಹಿಡಿದು ಮತಪೆಟ್ಟಿಗೆಗಳನ್ನು ಸ್ಟಾಂಗ್ ರೂಂಗೆ ರವಾನಿಸುವ ಮೂಲಕ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಬಿದ್ದಿತ್ತು. ಇದಾಗ ಬಳಿಕ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಾಸಕರ ವಿರುದ್ಧ ತಿರುಗಿ ಬಿದ್ದಿರುವುದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ ಎನ್ನಲಾಗಿದೆ.

ಶಾಸರ ವಿರುದ್ಧ ವಾಗ್ದಾಳಿ: ಸಹಕಾರ ಸಂಘ ಉಳಿಸುವ ಸಲುವಾಗಿ ಚುನಾವಣೆ ನಡೆಸಬಾರದು ಎಂದು ಸಾಕಷ್ಟು ಪ್ರಯತ್ನ ಪಟ್ಟಿದ್ದೇವು. ಆದರೆ, ಶಾಸಕರ ಸರ್ವಾಧಿಕಾರ ಧೋರಣೆಯಿಂದ ಚುನಾವಣೆ ನಡೆಯುವ ಹಾಗೇ ಆಗಿದೆ. ಈಗಾಗಲೇ ಈ ಸೊಸೈಟಿ 3 ಲಕ್ಷ ರೂ.ನಷ್ಟದಲ್ಲಿದೆ. ಟಿ.ವೆಂಕಟರಮಣಯ್ಯ ಶಾಸಕರಾಗಿದ್ದಾಗ ಹಾಗೂ ಚುಂಚೇಗೌಡರು ಬಿಡಿಸಿಸಿ ನಿರ್ದೇಶಕರಾಗಿದ್ದಾಗ ಮುಚ್ಚುವ ಹಂತದಲ್ಲಿದ್ದ ಸುಮಾರು 8 ಸೊಸೈಟಿಗಳನ್ನು ಪುನಃಶ್ಚೇತನಗೊಳಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಹಕಾರ ಇರಬೇಕು ಎಂಬ ಉದ್ದೇಶದಿಂದ ಒಮ್ಮತದಿಂದ ಮೂರು ಪಕ್ಷಗಳಿಗೂ ನಾಲ್ಕು ಸ್ಥಾನಗಳನ್ನು ನೀಡುವ ಅಭಿಪ್ರಾಯ ಇತ್ತು. ಆದರೆ, ಶಾಸಕರ ದುರಾಡಳಿತದ ಕಾರಣದಿಂದ ಚುನಾವಣೆ ನಡೆಯುವ ಹಾಗೇ ಆಗಿದೆ. ಒಬ್ಬ ಜನಪ್ರತಿನಿಧಿಯಾಗಿ ಇಂತಹ ಸನ್ನಿವೇಶ ಬಂದಾಗ ಯಾವ ರೀತಿ ವಾತಾವರಣ ತಿಳಿಗೊಳಿಸಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲ ಎಂದು ಎಂದು ಶಾಸಕ ಧೀರಜ್ ಮುನಿರಾಜ್ ವಿರುದ್ಧ ಹರೀಶ್ ಗೌಡ ಗುಡುಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮೈತ್ರಿ ಧರ್ಮ ಪಾಲನೆ ವಿಷಯವಾಗಿ ಮತ್ಯಾವ ತಿರುವುಪಡೆಯಲಿದೆಯೋ ಎಂಬ ಚರ್ಚೆ ನಡೆಯುತ್ತಿದೆ.

  ದೊಡ್ಡಬಳ್ಳಾಪುರದಲ್ಲಿ ಬಿಸಿ ರಾಜಕೀಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡಬಳ್ಳಾಪುರ ಹೊರತುಪಡಿಸಿ ಇನ್ಯಾವ ಕಡೆಯೂ ರಾಜಕೀಯ ಸಮರ ಕಾಣುತ್ತಿಲ್ಲ. ಅಲ್ಲೆಲ್ಲ ಮಾಜಿ ಶಾಸಕರು ಸಾರ್ವಜನಿಕವಾಗಿ ಕಾಣಿಸುವುದು ತೀರ ಅಪರೂಪ ಎನ್ನುವಂತಾಗಿದೆ. ಪ್ರತಿಪಕ್ಷಗಳ ಮುಖಂಡರು ಮುಂದಿನ ಚುನಾವಣೆ ಯೋಜನೆಯಲ್ಲಿದ್ದಾರೆ.ಆದರೆ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆಗಾಗ ಚಕಮಕಿ ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಶಾಸಕರ ವಿರುದ್ಧ ಹಲವು ಕಾಂಗ್ರೆಸ್ ಮುಖಂಡರು ಹರಿಹಾಯುವುದು ಹಾಗೆಯೇ ಶಾಸಕರು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರುವುದು ನಡೆದೆ ಇದೆ. ಏತನ್ಮಧ್ಯೆ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿಯಲ್ಲಿಯೇ ತಿಕ್ಕಾಟ ಆರಂಭವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ರಾಜಕೀಯ ಬಿಸಿಯೇರುತ್ತಿದೆ.