ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರ ಸದ್ಯಕ್ಕೆ ಅಪ್ರಸ್ತುತ. ಒಂದು ವೇಳೆ ಅಗತ್ಯ ಬಿದ್ದರೆ ಎರಡೂ ಕಡೆಯ ರಾಜ್ಯ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರೈತಸಂಘ ತಾಲೂಕು ಆಧ್ಯಕ್ಷ ಚಿಕ್ಕಾಡೆ ಹರೀಶ್ ತಿಳಿಸಿದರು.
ರೈತ ಸಂಘದ ನಾಯಕರು ಕಾಂಗ್ರೆಸ್‌ನವರ ಬೆಂಬಲ ಕೋರಿಲ್ಲ. ಸಮಯ ಬಂದಾಗ ಚರ್ಚೆ ಮಾಡೋದು ಸೂಕ್ತ. ದರ್ಶನ್ ಪುಟ್ಟಣ್ಣಯ್ಯ ಅವರು ರೈತರು ಮತ್ತು ಕ್ಷೇತ್ರದ ಜನರ ಸೇವೆಗಾಗಿ ವಿದೇಶದಿಂದ ಹಿಂದಿರುಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ಅವರ ಬಗ್ಗೆ ಮಾತನಾಡುವುದು ತಪ್ಪು. ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ಮಾತನಾಡುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಸರ್ಕಾರಿ ಸೇವೆ ತ್ಯಜಿಸಿ ಐದಾರು ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದಿದ್ದಾರೆ. ಅವರು ಮತ್ತೊಬ್ಬರ ಬಗ್ಗೆ ಗೌರವವಾಗಿ ಮಾತನಾಡುವುದನ್ನು ಕಲಿಯಲಿ. ಒಬ್ಬರ ತೇಜೋವಧೆ ಮಾಡೋದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ವೈಯಕ್ತಿಕ ಕಾರಣ ಹಾಗೂ ಕೆಲಸದ ಒತ್ತಡಗಳಿಂದ ರೈತ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದು, ಈವರೆಗೂ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ. ಕೆ.ಎಸ್.ಪುಟ್ಟಣ್ಣಯ್ಯ ಅವರ ಹೋರಾಟಗಳಿಂದ ಪ್ರೇರೇಪಿತರಾಗಿರುವ ನಾವು ಮುಂದೆ ಕಾರ್ಯಕರ್ತನಾಗಿ ಸಂಘದ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಲಿದ್ದೇನೆ ಎಂದು ತಿಳಿಸಿದರು.
ರೈತ ಸಂಘ ಮುಖಂಡರಾದ ಬೀರಶೆಟ್ಟಹಳ್ಳಿ ಗಿರೀಶ್, ಗಾಣದಹೊಸೂರು ಪುನೀತ್, ಮಲ್ಲಿಗೆರೆ ರಾಜು, ಚಿಕ್ಕಾಡೆ ನಾಗರಾಜು ಸುದ್ದಿಗೋಷ್ಠಿಯಲ್ಲಿದ್ದರು.