ಸರಗೂರು: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಗ್ರಾಮದ ಮಹಿಳೆಯರಿಗೆ ಹಾಗೂ ಗ್ರಾಮಸ್ಥರಿಗೆ ಹಣದಾಸೆ ತೋರಿಸಿ, ಸಾಲ ನೀಡಿ ನಂತರ ಕಾನೂನುಬಾಹಿರವಾಗಿ ದುಪ್ಪಟ್ಟು ಹಣ ವಸೂಲಿ ಮಾಡುವುದಾಗಲಿ ಅಥವಾ ಇನ್ನಿತರ ತೊಂದರೆ ನೀಡುವುದಾಗಲಿ ನಮ್ಮ ಗಮನಕ್ಕೆ ದೂರು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸರಗೂರು ಪೋಲಿಸ್ ಠಾಣೆ ಪಿಎಸ್‌ಐ ನಂದೀಶ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಸೋಮವಾರ ನಡೆದ ವಿವಿಧ ಖಾಸಗಿ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಮ್ಯಾನೇಜರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ಮನೆಗಳಿಗೆ ಹೋಗಿ ಮಹಿಳೆಯರಿಗೆ ತೊಂದರೆ ನೀಡುತ್ತಿದ್ದೀರಿ. ಕಾನೂನು ರೀತಿ ಹಣ ವಸೂಲಿ ಮಾಡಿದರೆ ನಮ್ಮ ತಕರಾರು ಇಲ್ಲ. ಆದರೆ ರಾತ್ರಿ ವೇಳೆ ತೆರಳಿ ಮನೆಯವರಿಗೆ ತೊಂದರೆ ನೀಡುವುದು, ಬೆದರಿಕೆ ಹಾಕುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನೀವು ಕಾನೂನು ಪ್ರಕಾರ ಯಾವ ಸಮಯದಲ್ಲಿ ಹಣವನ್ನು ಕಟ್ಟಿಸಿಕೊಳ್ಳಬೇಕೋ ಆ ಸಮಯದಲ್ಲಿ ಹೋಗಿ ಹಣವನ್ನು ಕಟ್ಟಿಸಿಕೊಳ್ಳಬೇಕು. ಹಣ ಕಟ್ಟಲಿಲ್ಲವೆಂದರೆ ಕಾನೂನು ಪ್ರಕಾರ ಅವರಿಗೆ ನೋಟಿಸ್ ನೀಡಿ ಅದನ್ನು ಬಿಟ್ಟು ನಿಯಮ ಮೀರಿ ಅವರನ್ನು ಬೆದರಿಸುವುದು, ಮನೆ ಜಪ್ತಿ ಮಾಡಲು ಮುಂದಾಗುವುದು ಸರಿಯಲ್ಲ ಎಂದರು.
ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಬ್ಯಾಂಕ್‌ಗಳಲ್ಲಿನ ಲಾಕರ್‌ಗಳಿಗಿರುವ ಭದ್ರತೆ, ಸಿಸಿಟಿವಿ ನಿರ್ವಹಣೆ, ಎಟಿಎಂಗಳ ಸುರಕ್ಷತೆ ಸೇರಿದಂತೆ ಆಯಾ ಬ್ಯಾಂಕ್‌ಗಳು ಸೂಕ್ತ ಕ್ರಮವಹಿಸುವಂತೆ ಸೂಚನೆ ನೀಡಿದರು.
ಎಲ್ಲ ಬ್ಯಾಂಕ್‌ಗಳಲ್ಲೂ ಸಿಸಿಟಿವಿ, ಅಲಾರಾಂ ಅಳವಡಿಕೆಗೆ ಮಾಡಬೇಕು ಹಾಗೂ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ದರೋಡೆಕೋರರು ಸಾಮಾನ್ಯ ಜನರಂತೆ ಬ್ಯಾಂಕ್‌ಗಳ ಮುಂದೆ ತಿರುಗಾಡುತ್ತಿರುತ್ತಾರೆ. ಅಂತಹವರನ್ನು ಬ್ಯಾಂಕ್ ಸಿಬ್ಬಂದಿ ಗಮನಹರಿಸಬೇಕು. ಅನುಮಾನ ಬಂದ ತಕ್ಷಣವೇ ಪೊಲೀಸರಿಗೆ ತಿಳಿಸಬೇಕು ಎಂದರು.
ತಾಲೂಕಿನ ವಿವಿಧೆಡೆ ಇರುವ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ನಿಮ್ಮ ಮೇಲ್ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ವಿಶೇಷವಾಗಿ ಮುತ್ತೂಟ್ ಫೈನಾನ್ಸ್‌ಗಳಲ್ಲಿ ಹೆಚ್ಚಿನ ಜನರು ಚಿನ್ನದ ಆಭರಣಗಳನ್ನು ಗಿರಿವಿ ಇಟ್ಟಿರುತ್ತಾರೆ. ಹೀಗಾಗಿ ಹೆಚ್ಚಿನ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ರೀತಿ ಕೃಷಿ ಪತ್ತಿನ ಸಹಕಾರ ಸಂಘಗಳು ಭದ್ರತೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಕ್ರೈಂ ಬ್ರಾಂಚ್ ಪಿಎಸ್‌ಐ ಗೋಪಾಲ್, ಕಸಾಪ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹುಣ್ಣಸಹಳ್ಳಿ ನಾಗರಾಜು, ಎಎಸ್‌ಐ ನಾರಾಯಣ್, ಸಿಬ್ಬಂದಿಗಳಾದ ಇಮ್ರಾನ್, ಚಂದ್ರ, ಆನಂದ, ದೇವರಾಜು, ಶಿವರಾಜು, ಉಷಾ ಎಲ್ಲ ಬ್ಯಾಂಕ್ ಸಿಬ್ಬಂದಿ ಮತ್ತು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಇದ್ದರು.