ಹುಣಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧ ನೀತಿಯನ್ನು ಖಂಡಿಸಿ ರೈತಪರ ಯೋಜನೆಗಳನ್ನು ರೂಪಿಸಲು ಆಗ್ರಹಿಸಿ ಫೆ.13ರಂದು ಮೈಸೂರಿನಲ್ಲಿ ಜಿಲ್ಲಾ ರೈತಸಮ್ಮೇಳನ ಆಯೋಜಿಸಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಕುರಿತಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲಾ ರೈತ ಸಮಾವೇಶವನ್ನು ವಿಶ್ವ ರೈತ ಚೇತನಾ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದು, ತಾಲೂಕಿನಿಂದ ಅತಿಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸಲಿದ್ದಾರೆ. ರೈತ ಮಹಿಳೆಯರು ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳದಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ರೈತ ಸಂಘ ಕಳೆದ ಜ.29ರಂದು ರಾಜ್ಯ ಸಮಾವೇಶ ಕೈಗೊಂಡು ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇದೀಗ ಮೈಕ್ರೋಫೈನಾನ್ಸ್‌ಗಾರರಿಗೆ ನಿರ್ಬಂಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಕ್ರಮವಹಿಸಿದೆ. ಇದರೊಂದಿಗೆ 20 ಬೇಡಿಕೆಗಳನ್ನು ಇಟ್ಟು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ಉಂಡವಾಡಿ ಚಂದ್ರೇಗೌಡ, ತಿಪ್ಪೂರು ಸೋಮಶೇಖರ್, ಆಲಿಜಾನ್, ರಾಮಕೃಷ್ಣೇಗೌಡ, ಕಲ್ಲಹಳ್ಳಿ ವಿಷಕಂಠಪ್ಪ, ಕಲ್ಲಹಳ್ಳಿ ಸತೀಶ, ತಮ್ಮಣ್ಣೇಗೌಡ, ಸಾಲಿಗ್ರಾಮ ಶೇಖರ್, ಹುಲ್ಯಾಳು ಮಾದೇಗೌಡ, ಮುಳ್ಳೂರು ಮಾದೇವ್ ರಾವ್, ಹೊಸೂರು ಸುರೇಶ್, ತಿಪ್ಪೂರು ಕೆಂಚೇಗೌಡರು, ಕುಪ್ಪೆ ಗ್ರಾಮದ ಮಹೇಶ್ ಇತರರು ಭಾಗವಹಿಸಿದ್ದರು.