ಜಿಲ್ಲೆ

ಮೈಕ್ರೋ ಫೈನಾನ್ಸ್‌ ಪ್ರತಿನಿಧಿಗಳು ಸರ್ಕಾರದ ಆದೇಶ ಪಾಲಿಸಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಕಟ್ಟುನಿಟ್ಟಿನ ಸೂಚನೆ

ಹಾಸನ: ಸರ್ಕಾರವು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ 2025ಅನ್ನು ಫೆಬ್ರವರಿ 12ರಿಂದ ಜಾರಿಗೊಳಿಸಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡುವ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿ ಸಂದರ್ಭದಲ್ಲಿ ಸರ್ಕಾರದ ಆದೇಶದ ಮಾರ್ಗ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ 2025 ರ ಸಂಬಂಧ ಮೈಕ್ರೋ ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳು ಹಾಗೂ ಲೇವಾದೇವಿಗಾರರ ಸಭೆ ನಡೆಸಿ ಮಾತನಾಡಿದ ಅವರು, ಸಾಲ ವಸೂಲಿಗೆ ಸರ್ಕಾರದ ಸುಗ್ರೀವಾಜ್ಞೆಯಲ್ಲಿರುವ ನಿಯಮಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಾಲ ನೀಡುವ ಸಂದರ್ಭದಲ್ಲಿ ಸಾಲಗಾರನೊಂದಿಗೆ ಸಾಲದ ಕಾರಾರು ಮಾಡಿಸಿಕೊಳ್ಳಬೇಕು. ಸಾಲಗಾರನಿಂದ ಯಾವುದೇ ವಸ್ತುವನ್ನು ಗಿರವಿ ಇಟ್ಟುಕೊಳ್ಳಲು ಅವಕಾಶವಿಲ್ಲ ಹಾಗೂ ಸಾಲಗಾರನಿಗೆ ವಿಧಿಸುವ ನಿಬಂಧನೆಗಳು ಕನ್ನಡದಲ್ಲಿ ನಮೂದಿಸಿ ನೀಡಬೇಕು. ಸಾಲ ವಸೂಲಾತಿ ವೇಳೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ನೀಡುವುದು, ಸಾಲಗಾರರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಲು ಮಾನಸಿಕ ಹಿಂಸೆ ನೀಡಿದ್ದಲ್ಲಿ ಜಾಮೀನು ರಹಿತವಾದ ಪ್ರಕರಣವನ್ನು ದಾಖಲಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

ಸಾಲಗಾರನಿಗೆ ಸರ್ಕಾರದ ಯಾವುದೇ ಕಾರ್ಯಕ್ರಮದ ಅಡಿಯಲ್ಲಿ ದೊರೆಯುವ ಪ್ರಯೋಜನದ ಹಕ್ಕುಗಳು ಹಾಗೂ ಯಾವುದೇ ವಸ್ತುವನ್ನು ಸಾಲಗಾರನಿಂದ ಬಲವಂತವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಪಡೆಯುವಂತಿಲ್ಲ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಈ ನಿಯಮಗಳನ್ನು ಉಲ್ಲಂಘಿಸಿದರೆ ಹತ್ತು ವರ್ಷಗಳವರೆಗೂ ಶಿಕ್ಷೆ, 5 ಲಕ್ಷಕ್ಕೂ ಮೇಲ್ಪಟ್ಟು ರೂಪಾಯಿವರೆಗೆ ದಂಡವನ್ನು ವಿಧಿಸಬಹುದು. ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗುವವರಿಗೆ ಜಾಮೀನುರಹಿತವಾಗಿರುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರು ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿಗಾರರು ಈ ನಿಯಮನ್ನು ಉಲ್ಲಂಘಿಸಿದರೆ ಡಿವೈಎಸ್ಪಿ ಮೇಲಿನ ಹಂತದ ಅಧಿಕಾರಿ ಯಾವುದೇ ದೂರು ಪಡೆಯದೆ ಸುಮೊಟೊ ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ಅವರು ಆರ್‌ಬಿಐ ಮಾರ್ಗಸೂಚಿಗಳನ್ನು ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ಸಹಕಾರ ಇಲಾಖೆ ಉಪ ನಿಬಂದಕ ಕಿರಣ್ ಕುಮಾರ್ ಹಾಗೂ ವಿವಿಧ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು.