ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ಪೊಲೀಸರ ರಕ್ಷಣೆ ಪಡೆದು ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ, ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಾಯಿತ ಮೈಕ್ರೋ ಫೈನಾನ್ಸ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಾರ್ಗಸೂಚಿಗೆ ಒಳಪಡುತ್ತವೆ. ರಾಜ್ಯ ಸರ್ಕಾರದ ಇದನ್ನು ಗಮನಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇಂತಿಷ್ಟು ಬಡ್ಡಿ ಹಾಕಬೇಕು ಎಂದು ಆರ್‌ಬಿಐ ಗೈಡ್‌ಲೈನ್ಸ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪೊಲೀಸರಿಗೆ ಅಧಿಕಾರ ಕೊಟ್ಟು ಅದರಲ್ಲಿ ಭ್ರಷ್ಟಾಚಾರ ಆಗಬಾರದು. ಸಮಿತಿಗೆ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ನಿಗಾ ವಹಿಸಬೇಕು.
ನೋಂದಣಿಯಾಗದ ಸಾಕಷ್ಟು ಫೈನಾನ್ಸ್ ಸಂಸ್ಥೆಗಳಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲೂ(ಎನ್‌ಬಿಎಫ್‌ಸಿ)ಇದಕ್ಕೆ ಪವರ್ ಸಿಗ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಪೊಲೀಸರ ವಿರುದ್ಧ ನಾನು ಆರೋಪ ಮಾಡುವುದಿಲ್ಲ ಎಂದರು.
ಕುರ್ಚಿ ಜಗಳ: ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಒಮದೂವರೆ ವರ್ಷ ಆಗಿದೆ. ರಾಜ್ಯದಲ್ಲಿ ಏನೇ ನಡೆದರೂ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಾರೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಕೇಂದ್ರ ಬಿಜೆಪಿ ಹಾಗೂ ರಾಜ್ಯದ ಬಿಜೆಪಿ ಕಾರಣ ಅಂತಾರೆ. ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ಜನರು ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡಲಿ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆಯಲ್ಲದೇ, ಕುರ್ಚಿ ಜಗಳದಲ್ಲಿ ನಿರತವಾಗಹಿದೆ ಎಂದು ಕಿಡಿಕಾರಿದರು.
ಅಧಿಕಾರದಲ್ಲಿ ಸಿಎಂ ಮುಂದುವರಿಯುತ್ತಿರುವುದೇ ಅನೈತಿಕ: ಏನಾದರೂ ಮಾಡಿ ಮುಡಾ ಹಗರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಆದೇಶದ ವಿರುದ್ಧವಾಗಿ ಹೈಕೋರ್ಟ್‌ಗೆ ಹೋದರು.
ಆದರೆ, ರಾಜ್ಯಪಾಲರ ನಡೆಯನ್ನು ಹೈಕೋರ್ಟ್ ತೆಗೆದು ಹಾಕಿಲ್ಲ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ್ದಾರೆಂದು ಹೈಕೋರ್ಟ್ ಹೇಳಿದ ಮೇಲೂ ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರಿದಿರುವುದೇ ಒಂದು ಅನೈತಿಕ ಎಂದು ಹರಿಹಾಯ್ದರು.