ಚಾಮರಾಜನಗರ: ಸಾಲ ವಸೂಲಾತಿ ವೇಳೆ ನಿಯಮ ಬಾಹಿರವಾಗಿ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಸೇನಾಪಡೆ ಜಮಾಯಿಸಿದ್ದ ಪ್ರತಿಭಟನಾಕಾರರು ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಸೇನಾ ಪಡೆದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲದ ಹೆಸರಿನಲ್ಲಿ ಸುಲಿಗೆ ಮಾಡುತ್ತಿವೆ. ಜನರಿಗೆ ಆಮೀಷವೊಡ್ಡಿ ಸಾಲ ನೀಡಿ, ಮರು ಪಾವತಿ ವಿಳಂಬವಾದರೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿವೆ ಎಂದು ದೂರಿದರು.
ಮೈಕ್ರೋ ೈನಾನ್ಸ್‌ಗಳ ಹಾವಳಿಯಿಂದಾಗಿ ರಾಜ್ಯದಲ್ಲಿ ಹಲವು ಕಡೆಗಳಲ್ಲಿ ಕುಟುಂಬಗಳು ಊರು ಬಿಟ್ಟಿವೆ. ಹಲವರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವವರೂ ಇದ್ದಾರೆ. ಹೀಗಾಗಿ ಜನರು ಸಾಲಕ್ಕೆ ಹೆದರದೆ ಊರು ತೊರೆಯಬಾರದು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಮೈಕ್ರೋ ಫೈನಾನ್ಸ್‌ಗಳನ್ನು ರದ್ದಪಡಿಸಿ, ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ನಂಜುಂಡಶೆಟ್ಟಿ, ವೀರಭದ್ರ, ಆಟೋ ನಾಗೇಶ್, ಶಿವಣ್ಣ, ಸಿದ್ದರಾಜು, ರಾಚಪ್ಪ ಭಾಗವಹಿಸಿದ್ದರು.