ಜಿಲ್ಲೆ

ಮೈ ರೋಮಾಂಚನಗೊಳಿಸಿದ ಅಘನಾಶಿನಿ ಆರತಿ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ, ಕುಮಟಾ

ಹಿಂದುಗಳ ಪಾಪನಾಶಿನಿ ಕಾಶಿಯಲ್ಲಿ ಗಂಗಾ ನದಿಗೆ ಆರತಿ ಪ್ರಸಿದ್ಧ. ಅದೇ ಸ್ವರೂಪದಲ್ಲಿ ಉತ್ತರ ಕನ್ನಡದ ಪಾಪ ನಾಶಿನಿ ಅಘನಾಶಿನಿ ನದಿಗೆ ಆರತಿಯ ಕಾರ್ಯಕ್ರಮ ಮೊದಲ ಬಾರಿಗೆ ಶನಿವಾರ ನಡೆದು. ಸೇರಿದ್ದ ಜನರ ಮೈ ರೋಮಾಂಚನಗೊಳಿಸಿತು.

ಯುವಾ ಬ್ರಿಗೇಡ್ ಕುಮಟಾ ತಂಡದಿಂದ ಶನಿವಾರ ಮಿರ್ಜಾನದ ತಾರಿಬಾಗಿಲಿನಲ್ಲಿ ಅಘನಾಶಿನಿ ನದಿಗೆ ಆರತಿ ಕಾರ್ಯಕ್ರಮವನ್ನು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಮ್ಮ ನದಿಗಳ ಬಗ್ಗೆ ಜನರಲ್ಲಿ ಗೌರವ ಮೂಡಿಸುವ ಕೆಲಸ ಆಗಬೇಕಿದೆ. ನದಿಗಳನ್ನು ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಇದೆ. ನದಿ ಮಾತ್ರವಲ್ಲ ಇಡಿಯ ಪರಿಸರವನ್ನು ಕಾಪಾಡಿಕೊಳ್ಳಬೇಕು. ನದಿ ರಕ್ಷಣೆಯ ಜವಾಬ್ದಾರಿ ಜವಾಬ್ದಾರಿಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಬೇಕಿದೆʼ ಎಂದರು.
ಪ್ಲಾಸ್ಟಿಕ್ ಬಳಕೆಯಿಂದ ಮನೆ ಮಾತ್ರವಲ್ಲ, ಸುತ್ತಲಿನ ಪರಿಸರವೂ ಮಾಲಿನ್ಯಗೊಳ್ಳುತ್ತದೆ. ಅಘನಾಶಿನಿ ನದಿಯ ಇಂದಿನ ಆರತಿ, ಗಂಗಾ ನದಿಯ ಆರತಿಯಿಂದ ಪ್ರಭಾವಿತಗೊಂಡಿದೆ. ಹಿಂದೆ ನಂಜನಗೂಡಿನ ಯುವಾ ಬ್ರಿಗೇಡ್ ಕಾರ್ಯಕರ್ತರು ಕಪಿಲಾ ನದಿಗೆ ಆರತಿ ಮಾಡಿದ್ದರು. ಈಗ ಪ್ರತಿವರ್ಷ ಅಲ್ಲಿ ನದಿಗೆ ಆರತಿ ನಡೆಯುತ್ತಿದ್ದು ಹತ್ತಾರು ಸಾವಿರ ಜನ ಆರತಿ ಕಾರ್ಯಕ್ರಮದ ವೇಳೆ ನದಿಯುದ್ದಕ್ಕೂ ದೀಪ ಬೆಳಗಿ ಸಂಭ್ರಮಿಸುತ್ತಾರೆ. ಹೀಗೆ ಎಲ್ಲೆಡೆ ಪ್ರತಿವರ್ಷ ನದಿಯ ಬಗೆಗೆ ಗೌರವ ಮೂಡಿಸುವ ಕೆಲಸ ಆಗಬೇಕು. ಮುಂದಿನ ಪೀಳಿಗೆಯ ಹೆಗಲಿಗೆ ನದಿ ರಕ್ಷಣೆಯ ಜವಾಬ್ದಾರಿ ಹಾಕಬೇಕು. ಇದರಿಂದ ನಾಗರಿಕತೆ ಮತ್ತು ದೇಶ ಶಾಶ್ವತವಾಗಿ ಉಳಿಯುತ್ತದೆ. ಅಘನಾಶಿನಿಯ ಜೀವವೈವಿಧ್ಯತೆಯ ಬೆಂಬಲವಾಗಿ ಭಾರತ ಮಾತ್ರವಲ್ಲ ಇಡೀ ಜಗತ್ತು ನಿಂತಿದೆ. ಏಕೆಂದರೆ ಜಗತ್ತಿನ ಉಳಿವು ಭಾರತದ ಅಳಿವು-ಉಳಿವಿನ ಮೇಲೆ ನಿಂತಿದೆ ಎಂದರು.
ಆದಿಚುಂಚನಗಿರಿ ಸಂಸ್ಥಾನದ ಶಾಖಾ ಮಠಾಧೀಶ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮಿನುಗಾರರ ಜೀವನ ಹಾಗೂ ನದಿಯ ಬಾಂಧವ್ಯವನ್ನು ವಿವರಿಸಿ ನದಿಯುಳಿದರೆ ನಾಡು ಎಂದರು. ಅತಿಥಿ ವಿದ್ವಾನ್ ಎಂ.ಆರ್. ಉಪಾಧ್ಯಾಯ ಭಾರತದ ಸಂಸ್ಕೃತಿ ಕುರಿತು ವಿವರಿಸಿದರು.
ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಣ್ಯರು ಭಾರತ ಮಾತೆಯ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾರಿಬಾಗಿಲಿನಲ್ಲಿ ಅಘನಾಶಿನಿ ನದಿಯ ದಡದುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗಂಗಾ ನದಿಯಲ್ಲಿ ನಡೆಯುವ ಆರತಿಯಂತೆಯೇ ವಿಶೇಷ ಸಜ್ಜಿಕೆಯಲ್ಲಿ ತರಬೇತು ಪಡೆದ ಸ್ಥಳೀಯ ಯುವಕ-ಯುವತಿಯರೇ ಏಳು ನಿಮಿಷಗಳ ಆರತಿ ಕಾರ್ಯಕ್ರಮ ನಡೆಸಿಕೊಟ್ಟರು. ಆರತಿ ವೀಕ್ಷಿಸಲು ವಿವಿಧ ತಾಲೂಕುಗಳಿಂದಲೂ ಜನರು ಆಗಮಿಸಿದ್ದು ಮೊದಲ ಬಾರಿಗೆ ನಡೆದ ಅಘನಾಶಿನಿ ನದಿ ಆರತಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಸ್ಥಳೀಯ ಪಂಚಾಯಿತಿ ಸದಸ್ಯ ಗಣೇಶ ಅಂಬಿಗ, ಯುವಾ ಬ್ರಿಗೇಡ್ ದಕ್ಷಿಣ ರಾಜ್ಯಸಂಚಾಲಕ ಧರ್ಮಾ ಹೊನ್ನಾರಿ, ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ, ಜಿಲ್ಲಾ ಸಂಚಾಲಕ ಸತೀಶ ಪಟಗಾರ, ಜಿಲ್ಲಾ ಸಹ ಸಂಚಾಲಕ ರಂಜೀತ, ಸದಸ್ಯರಾದ ಸಂದೀಪ, ಚಿದಾನಂದ, ಗೌರೀಶ, ದೀಪಕ ಹೊನ್ನಾವರ, ಅಕ್ಷಯ ಶಿರಸಿ, ಲಕ್ಷ್ಮೀಕಾಂತ, ಸಚಿನ, ಈಶ್ವರ, ವಿನೋದ, ರವೀಶ, ಗಿರೀಶ, ಕಿರಣ ಇನ್ನಿತರರು ಇದ್ದರು.