ಮಾಂಜರಿ: ಬೇಸಿಗೆಯ ರಣಬಿಸಿಲು, ಇನ್ನೊಂದೆಡೆ ಮೇವಿನ ಕೊರತೆಯಿಂದಾಗಿ ಬಹುತೇಕ ಕುರಿಗಾರರು ಕುರಿಗಳೊಂದಿಗೆ ವಲಸೆ ಹೋಗುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಕುರಿಗಾರರು ಮೇವಿನ ಕೊರತೆಯಿಂದಾಗಿ ನದಿಗಳ ದಂಡೆಯ ಪರಿಸರದತ್ತ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಊರೂರು ಸುತ್ತಿ ಕುರಿಗಳನ್ನು ಮೇಯಿಸುತ್ತಾರೆ. ಬೇಸಿಗೆ ಮುಗಿದ ನಂತರ ಮತ್ತೆ ಸ್ವ-ಗ್ರಾಮಗಳತ್ತ ಹೆಜ್ಜೆ ಹಾಕುವ ಪರಿಪಾಠವಿದೆ. ಕುರಿಗಳ ಪಾಲನೆ, ಪೋಷಣೆಗೆ ಕುರಿಗಾರರು ಪಡುವ ಕಷ್ಟ-ನಷ್ಟ ಹೇಳತೀರದು. ಕುರಿಗಳನ್ನು ತಮ್ಮ ಪಾಲಿನ ಲಕ್ಷ್ಮೀ ಎಂದೇ ಪರಿಗಣಿಸುವ ಹಾಲುಮತ ಜನಾಂಗ ವರ್ಷದ ನಾಲ್ಕಾರು ತಿಂಗಳು ಅಲೆಮಾರಿಗಳಂತೆ ತಮ್ಮ ಕುರಿಗಳೊಂದಿಗೆ ವಲಸೆ ಹೋಗುವುದು ಸಾಮಾನ್ಯ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಈ ಭಾಗದಲ್ಲಿ ಮಳೆ ಸುರಿಯುತ್ತದೆ. ಇಂತಹ ಮಳೆ-ಗಾಳಿಯಲ್ಲಿ ಕುರಿಗಳನ್ನು ರಕ್ಷಿಸುವುದೂ ತುಂಬ ಕಷ್ಟಕರ. ವಿಜಯಪುರ, ಬಾಗಲಕೋಟೆ ಕಡೆಗಳಲ್ಲಿ ಮಳೆ ಸ್ವಲ್ಪ ಕಡಿಮೆ ಇರುತ್ತದೆ. ಅಲ್ಲದೆ, ಆ ಜಿಲ್ಲೆಗಳಲ್ಲಿ ಬೇಸಿಗೆಯ ಬಿಳಿಜೋಳ ರಾಶಿ ಮುಗಿದು ಕುರಿಗಳಿಗೆ ಮೇಯಲು ಮೇವು ಸಿಗುತ್ತದೆ. ಅದಕ್ಕಾಗಿ ಕುರಿಗಾಹಿಗಳು ಸುಮಾರು ನಾಲ್ಕು ತಿಂಗಳು ಕುರಿಗಳನ್ನು ಹೊಡೆದುಕೊಂಡು ಅತ್ತ ಹೋಗುತ್ತಾರೆ. ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಹಾಲುಮತ ಕುಟುಂಬಗಳು, ಕುರಿಗಳೊಂದಿಗೆ ಊರು ಬಿಡುವ ಮುನ್ನ ಆರಾಧ್ಯ ದೇವರಿಗೆ ಕವಲು ಹಚ್ಚಿ ದೇವರ ಅಪ್ಪಣೆ ಪಡೆದುಕೊಂಡೇ ಹೋಗುವ ಸಂಪ್ರದಾಯವಿದೆ.
ಗುಡ್ಡಗಾಡು, ಹಳ್ಳ-ಕೊಳ್ಳ ಅಡವಿಗಳಲ್ಲಿ ಕುರಿಗಳೊಂದಿಗೆ ಅಲೆದಾಡುವ ಕುರಿಗಾರರ ಕುರಿಗಳ ಪಾಲನೆ, ಪೋಷಣೆಗೆ ವಲಸೆ ಹೋಗುವುದು ಅನಿವಾರ್ಯ. ಕೋವಿಡ್-19 ಎರಡನೆಯ ಅಲೆ ಹೆಚ್ಚಾಗಿರುವ ಈ ದಿನಗಳಲ್ಲಿ ಊರಿಂದ ಊರಿಗೆ ವಲಸೆ ಹೋಗುವ ಕುರಿಗಾಹಿಗಳಿಗೆ ಸವಾಲು ಎದುರಾದಂತಾಗಿದೆ.