ಮೈಸೂರು: ನಗರದ ಕಿರುರಂಗಮಂದಿರದಲ್ಲಿ ಗುರುವಾರ ಜಾನಪದ ಸಂಭ್ರಮ ಮೇಳೈಸಿತ್ತು.
ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರದ ಸಮಾರೋಪ, ಜಾನಪದ ಸಂಭ್ರಮ ಮತ್ತು ನಾಟಕೋತ್ಸವದಲ್ಲಿ ಕಂಸಾಳೆ, ಡೊಳ್ಳುಕುಣಿತ, ಪೂಜಾ ಕುಣಿತ… ಹೀಗೆ ವಿವಿಧ ಜಾನಪದ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಲಾಯಿತು.
ಕಲಾಮಂದಿರದ ಪ್ರವೇಶ ದ್ವಾರದಿಂದ ಕಿರುರಂಗಮಂದಿರದವರೆಗೆ ಜಾನಪದ ಮೆರವಣಿಗೆ ನಡೆಯಿತು. ಕಲಾವಿದರು ತಮ್ಮ ಪ್ರದರ್ಶನ ನೀಡಿ ಗಮನ ಸೆಳೆದರು. ಸಭಾವೇದಿಕೆಯಲ್ಲಿ ಶಿಬಿರಾರ್ಥಿಗಳು ಕೋಲಾಟ, ಕಂಸಾಳೆ, ಡೊಳ್ಳುಕುಣಿತ ಪ್ರಸ್ತುತ ಪಡಿಸಿದರು. ದೇವಾನಂದ ವರಪ್ರಸಾದ್, ಡಾ.ಸೋಮಶೇಖರ್, ಪಿ.ಲಾಸ್ಯ, ಗಣೇಶ್, ಶ್ರೀನಿವಾಸ್‌ಮೂರ್ತಿ ಕಿರಗುಂದ, ಸಿಂಚನಾ ಚಿಕ್ಕೊಳಲೆ ಅವರು ಜಾನಪದ ಗೀತೆಗಳನ್ನು ಸೊಗಸಾಗಿ ಪ್ರಸ್ತುತಪಡಿಸಿದರು.
ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ಮಾತನಾಡಿ, ಶಾಂತಿ, ಸೌಹಾರ್ದತೆ, ಸಮಾನತೆಯ ಸಮಾಜವನ್ನು ಕಟ್ಟುವುದು ಜಾನಪದದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರಮ ಸಂಸ್ಕೃತಿ ಮೂಲಕ ಜಾನಪದ ಸೃಷ್ಟಿಯಾಗಿದ್ದು, ಶಾಂತಿ, ಸೌಹಾರ್ದತೆ, ಸಾಮರಸ್ಯ, ಮಾನವೀಯತೆ ಇಲ್ಲದ ಕಡೆಗೆ ಇಂದಿನ ಸಮಾಜ ಮುಖ ಮಾಡಿದೆ. ಇದನ್ನು ಸರಿದಾರಿಗೆ ತರುವ ಶಕ್ತಿ ಜಾನಪದಕ್ಕೆ ಇದೆ ಎಂದರು.
ಜನರ ಬಾಯಿ ಮಾತಿನ ಮೂಲಕ ಹರಡಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದ್ದು, ಇದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ ಆಗಿದೆ ಎಂದು ಹೇಳಿದರು.
ಯಾವುದೇ ಕಲೆ ಸಮಾಜದ ಒಳಿತಿಗೆ, ಮನುಷ್ಯನ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು. ಆಗಲೇ ಕಲೆಗೆ ಒಂದು ಸಾರ್ಥಕತೆ ಮತ್ತು ಅರ್ಥ ಬರುತ್ತದೆ ಎಂದು ತಿಳಿಸಿದರು.
ಹಿರಿಯ ರಂಗಕರ್ಮಿ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಗೌತಮ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇತರರು ಇದ್ದರು.