ಹಾಸನ: ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಒಂದು ಬದಿಯ ಕಾಮಗಾರಿ ಸಂಪೂರ್ಣ ಮುಗಿದಿರುವುದರಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಮಂಗಳವಾರ ಸ್ಥಳೀಯ ಅಂಗಡಿ ಮುಗಟ್ಟುಗಳ ವರ್ತಕರು ಮತ್ತು ಸಾರ್ವಜನಿಕರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಎಪಿ ಮುಖಂಡ ಅಗಿಲೆ ಯೋಗೀಶ್ ಎಚ್ಚರಿಸಿದರು.
ರೈಲ್ವೆ ಮೇಲ್ ಸೇತುವೆ ಕಾಮಗಾರಿ ಪ್ರಾರಂಭಕ್ಕೆ ನಾನು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. 2016-17ರಲ್ಲಿ ಈ ಕಾಮಗಾರಿಗೆ ಕೇಂದ್ರದಿಂದ ಅನುದಾನ ತರುವಲ್ಲಿ ನನ್ನ ಪರಿಶ್ರಮ ಹೆಚ್ಚಿದೆ. ಆದರೆ ದೇವೇಗೌಡರ ಮಕ್ಕಳಾಗಲಿ ಹಾಗೂ ಹಾಲಿ-ಮಾಜಿ ಶಾಸಕರು ಹಾಗೂ ಹಾಲಿ ಸಂಸದರ ಪಾತ್ರ ಏನು ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈಗಾಗಲೇ ಕಾಮಗಾರಿ ಒಂದು ಬದಿಯಲ್ಲಿ ಮುಗಿದಿದ್ದು ಕೆಲದಿನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸರ್ಕಾರ ಮತ್ತು ಅಧಿಕಾರಿಗಳು ಜನಪ್ರತಿನಿಧಿಗಳ ತಿಕ್ಕಾಟದಿಂದ ಸಂಚಾರವನ್ನು ಬಂದ್ ಮಾಡಲಾಗಿದೆ. ಮೇಲ್ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಮಂಗಳವಾರ ಅಲ್ಲಿಯ ಸ್ಥಳೀಯ ಅಂಗಡಿ ಮುಗಟ್ಟುಗಳ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಆನಂದ್, ಪದಾಧಿಕಾರಿಗಳಾದ ರೆಹಮಾನ್, ಮಂಜುನಾಥ್ ಹಾಜರಿದ್ದರು.