ತುಮಕೂರು: ವಿಧಾನಪರಿಷತ್ ಚುನಾವಣೆ ಘೋಷಣೆ ಬೆನ್ನಲ್ಲೇ ಕೆಐಎಡಿಬಿ ಉಪವಿಭಾಗಾಧಿಕಾರಿ (ಎಸಿ) ಹುದ್ದೆಗೆ ಆರ್.ಅನಿಲ್‌ಕುಮಾರ್ ರಾಜೀನಾಮೆ ನೀಡಿದ್ದಾರೆಂಬ ಸುದ್ದಿ ದಟ್ಟವಾಗಿದೆ.
ಜಿಪಂ ಮಾಜಿ ಸದಸ್ಯ ರಾಮಾಂಜನಯ್ಯ ಅವರ ಪುತ್ರ ಅನಿಲ್‌ಕುಮಾರ್ ರಾಜಕೀಯ ರಂಗ ಪ್ರವೇಶಿಸಲು ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆಯಲು (ವಿಆರ್‌ಎಸ್) ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಈ ಬಾರಿ ಪರಿಷತ್ ಚುನಾವಣೆ ರಂಗುಪಡೆದುಕೊಳ್ಳಲಿದೆ.
ನಿವೃತ್ತ ಐಎಸ್, ಕೆಎಎಸ್ ಸೇರಿ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಗಳಿಗೆ ಕೆಳಮನೆ, ಮೇಲ್ಮನೆ ಪ್ರವೇಶಿಸಲು ಅನುವು ಮಾಡಿಕೊಟ್ಟು ರಾಜಕೀಯ ಆಶ್ರಯ ಕಲ್ಪಿಸಿರುವ ಜೆಡಿಎಸ್ ಈಗ ಮತ್ತೊಮ್ಮೆ ದೊಡ್ಡ ಕುಳವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದೆ.
ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ನಾಯಕರಪಾಳ್ಯದ ನಿವೃತ್ತ ಶಿಕ್ಷಣಾಧಿಕಾರಿ, ಜಿಪಂ ಮಾಜಿ ಸದಸ್ಯ ರಾಮಾಂಜನಪ್ಪ ಅವರ ಪುತ್ರ ಅನಿಲ್ ಕುಮಾರ್‌ಗೆ ಜೆಡಿಎಸ್ ಗಾಳ ಹಾಕಿದೆ. ಹಾಲಿ ಸದಸ್ಯ ಬೆಮೆಲ್ ಕಾಂತರಾಜು ಅವರನ್ನು ಕಾಂಗ್ರೆಸ್ ಸೆಳೆದುಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಟಿಕೆಟ್ ಭರವಸೆ ನೀಡುವ ಮೂಲಕ ತನ್ನ ಸ್ಥಾನ ಉಳಿಸಿಕೊಳ್ಳುವ ಹೋರಾಟಕ್ಕೆ ಜೆಡಿಎಸ್ ದೃಢವಾದ ಹೆಜ್ಜೆ ಇಟ್ಟಿದೆ.
ಎಸಿ ಹುದ್ದೆಗೆ ಗುಡ್‌ಬೈ!?: ವಾಲ್ಮೀಕಿ ಸಮುದಾಯದ ಅನಿಲ್ ಕುಮಾರ್ ಕೆಎಎಸ್ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನೆಲಮಂಗಲ, ಗುಬ್ಬಿ, ಎಚ್.ಡಿ.ಕೋಟೆ, ಮಡಿಕೇರಿ, ವಿಜಯಪುರ, ನೆಲಮಂಗಲ, ಆನೇಕಲ್‌ನಲ್ಲಿ ತಹಸೀಲ್ದಾರ್ ಆಗಿ, ಬಿಡಿಎನಲ್ಲೂ ಕೆಲವು ಕಾಲ ಇದ್ದರು. ಇತ್ತೀಚೆಗೆ ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಬಡ್ತಿ ಪಡೆದಿದ್ದು ಕೆಐಎಡಿಬಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ನಿಟ್ಟಿನಲ್ಲಿ 2 ತಿಂಗಳ ಹಿಂದೆಯೇ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆಯಲು ಅರ್ಜಿ ಸಲ್ಲಿಸಿರುವ ಅನಿಲ್‌ಗೆ ತಾಂತ್ರಿಕ ಕೃಷಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುವ ಕನಸಿದೆ. ಈಗಾಗಲೇ ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಅನಿಲ್ ತಂದೆ ರಾಮಾಂಜನಪ್ಪ ಅವರನ್ನು ಬಳಸಿಕೊಂಡು ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಆಟಕ್ಕೆ ಅಣಿಯಾಗಿದೆ.
ರಾಜಣ್ಣ ವಿರುದ್ಧ ರಾಜಕೀಯ ಸೇಡು!: ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ವಾಲ್ಮೀಕಿ ಸಮುದಾಯದ ಅನಿಲ್‌ಗೆ ಜೆಡಿಎಸ್ ಗಾಳ ಹಾಕಿದೆ. ಇನ್ನೂ 20 ವರ್ಷದ ಸರ್ಕಾರಿ ಸೇವಾವಧಿ ತ್ಯಜಿಸುವ ನಿರ್ಧಾರಕ್ಕೆ ಬಂದಿರುವ ವಿಷಯ ಮುಂದಿಟ್ಟುಕೊಂಡು ಜೆಡಿಎಸ್ ವರಿಷ್ಠರು ಅನಿಲ್‌ಗೆ ಪರಿಷತ್ ಚುನಾವಣೆ ಟಿಕೆಟ್ ಕೊಡುವುದಲ್ಲದೆ ಮೇಲ್ಮನೆಗೆ ಗೆಲ್ಲಿಸಿಕೊಂಡು ಬರುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಣಿಸಲು ಬಹಿರಂಗವಾಗಿ ತೊಡೆತಟ್ಟಿದ್ದ ರಾಜಣ್ಣಗೆ ರಾಜಕೀಯವಾಗಿ ತಿರುಗೇಟು ಕೊಡಲು ಪರಿಷತ್ ಚುನಾವಣೆಯಲ್ಲಿ ರಾಜೇಂದ್ರ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರವಾಗಿದೆ.
ಸದ್ಯಕ್ಕೆ ರಾಜಕೀಯ ಕ್ಷೇತ್ರದ ಬಗ್ಗೆ ನನಗೆ ಆಸಕ್ತಿ ಇಲ್ಲ. ತಾಂತ್ರಿಕ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಬೇಕೆಂಬ ಕನಸಿದೆ. ಈ ನಿಟ್ಟಿನಲ್ಲಿ ಸ್ನೇಹಿತರೊಡಗೂಡಿ ಹೊಸ ಸಾಹಸಕ್ಕೆ ಕೈಹಾಕಲು ನಿರ್ಧರಿಸಿದ್ದೇನೆ. ಹಾಗಾಗಿ, 2 ತಿಂಗಳ ಹಿಂದೆಯೇ ಸ್ವಯಂ ನಿವೃತ್ತಿ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ಆರ್.ಅನಿಲ್‌ಕುಮಾರ್ ಎಸಿ, ಕೆಐಎಡಿಬಿ ಬೆಂಗಳೂರು