ಬೀದರ್: ಮೇಲ್ಮನೆಯಲ್ಲಿ ಹೊಡಿ-ಬಡಿ ಧೋರಣೆ ಪ್ರದರ್ಶಿಸಿದ ವಿಧಾನ ಪರಿಷತ್ ಸದಸ್ಯರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷರೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಓಂಪ್ರಕಾಶ ರೊಟ್ಟೆ ಅವರು ಬುಧವಾರ ನಗರದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಒಬ್ಬರೇ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಹಿರಿಯರ ಸದನ, ಚಿಂತಕರ ಚಾವಡಿ ಎಂದೇ ಖ್ಯಾತಿ ಹೊಂದಿರುವ ವಿಧಾನ ಪರಿಷತ್ಗೆ ಮಂಗಳವಾರ ಜರುಗಿದ ಘಟನೆ ಕಪ್ಪು ಚುಕ್ಕೆ ಅಂಟಿಸಿದೆ. ಮೇಲ್ಮನೆಗಿದ್ದ ಘನತೆ ಇದೀಗ ರಾಷ್ಟ್ರ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಪರಿಷತ್ನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸದಸ್ಯರು ನಡೆದುಕೊಂಡಿರುವಂಥ ರೀತಿ ನಾಚಿಕೆಗೇಡು. ಈ ಬೆಳವಣಿಗೆ ಲೋಕತಂತ್ರ ವ್ಯವಸ್ಥೆಯ ಕತ್ತು ಹಿಸುಕುವಂತಿದೆ. ಹೀಗಾಗಿ ತಪ್ಪಿತಸ್ಥರಿಗೆ ಸಸ್ಪೆಂಡ್ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಸದನದಲ್ಲಿ ಹೊಡಿ-ಬಡಿ, ತಳ್ಳಾಟ-ನೂಕಾಟ ಮಾಡುತ್ತಿರುವುದು ನೋಡಿದರೆ ಸದಸ್ಯರ ಮನಸ್ಥಿತಿ ಎಂಥದ್ದು ಎಂದು ಗೊತ್ತಾಗುತ್ತದೆ. ಕೆಲ ಸದಸ್ಯರ ವರ್ತನೆ ನೋಡಿದರೆ ಇವರು ಬೀದಿ ಗುಂಡಾಗಳೆಂದು ಕರೆಯಬೇಕಾ ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುವಂತಿದೆ. ಎಲ್ಲ ಪಕ್ಷದ ಸದಸ್ಯರು ಈ ಘಟನೆಗೆ ಸಮಾನ ಹೊಣೆಗಾರರು.ಹೀಗಾಗಿ ಇದರಲ್ಲ್ಲಿ ಪಾಲ್ಗೊಂಡ ಎಲ್ಲರ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇಟ್ಟು, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂಥ ಘಟನೆ ಮರುಕಳಿಸದಂತೆ ರಾಜ್ಯಪಾಲರು ವಿಷಯ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಕುರಿತು ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಗಿದೆ.