ಜಿಲ್ಲೆ

ಮೇಲುಕೋಟೆಯಲ್ಲಿ ತಿರುವಾಡಿಪ್ಪೂರಂ ಉತ್ಸವ

ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶನಿವಾರ ಮಹಾಲಕ್ಷ್ಮೀ ಅಮ್ಮನವರ ವರ್ಧಂತಿ ಅಂಗವಾಗಿ ತಿರುವಾಡಿಪ್ಪೂರಂ ಉತ್ಸವ ವೈಭವದಿಂದ ನೆರವೇರಿತು. ಜಿಟಿ ಜಿಟಿ ಮಳೆ, ಮೈ ಕೊರೆಯುವ ಚಳಿಯ ನಡುವೆಯೂ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದು ಧನ್ಯತೆ ಮೆರೆದರು.
ಮಹಾಲಕ್ಷ್ಮೀಯು ಆಂಡಾಳ್ ಮಾತೆ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದ ದಿನದ ಪ್ರತೀಕವಾಗಿ ತಿರುವಾಡಿಪ್ಪೂರಂ ಉತ್ಸವ ದೇಶದ ಎಲ್ಲಾ ಶ್ರೀವೈಷ್ಣವ ದೇವಾಲಯಗಳಲ್ಲಿ ನಡೆಯುತ್ತದೆ. ಅಂತೆಯೇ ಮೇಲುಕೋಟೆಯಲ್ಲೂ ಅಮ್ಮನವರ ವರ್ಧಂತಿ ಸಂಭ್ರಮದಿಂದ ನೆರವೇರಿತು.
ಸ್ಥಾನೀಕರಾದ ಕೋವಿಲ್ ನಂಬಿ ಮುಕುಂದನ್ ಹಾಗೂ ಕೋವಿಲ್ ನಂಬಿ ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ಅಮ್ಮನವರಿಗೆ ಬೆಳಗ್ಗೆ 8ಗಂಟೆಗೆ ಬೆಳ್ಳಿಯ ದೊಡ್ಡ ಆದಿಶೇಷವಾಹನೋತ್ಸವ, ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಂದಿಗೆ ನೆರವೇರವೇರಿತು. ನಂತರ ದ್ವಾದಶಾರಾಧನೆಯೊಂದಿಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿತು.
ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಮುಜರಾಯಿ ಇಲಾಖೆಯ ಕೇಂದ್ರ ಸ್ಥಾನೀಕ ಸಹಾಯಕ ಯತಿರಾಜ ಸಂಪತ್ಕುಮಾರನ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಇತರರು ಇದ್ದರು.

.