ಜಿಲ್ಲೆ

ಮೇಲುಕೋಟೆ ದೇವಾಲಯದಲ್ಲಿ ನಾಗವಲ್ಲಿ ಮಹೋತ್ಸವ ಸಂಪನ್ನ

ಮೇಲುಕೋಟೆ: ಆಷಾಢ ಜಾತ್ರಾಮಹೋತ್ಸವ ಶ್ರೀ ಕೃಷ್ಣರಾಜಮುಡಿ ಬ್ರಹ್ಮೋತ್ಸವದ 3ನೇ ತಿರುನಾಳ್ ಅಂಗವಾಗಿ ಮೇಲುಕೋಟೆ ದೇವಾಲಯದಲ್ಲಿ ಮಂಗಳವಾರ ಸಂಜೆ ನಾಗವಲ್ಲೀ ಮಹೋತ್ಸವ ನರಂದಾಳಿಕಾರೋಹಣ ಶಾಸ್ತ್ರೋಕ್ತವಾಗಿ ನೆರವೇರಿತು. ಚೆಲುವನಾರಾಯಣಸ್ವಾಮಿಗೆ ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ಬೆಳ್ಳಿಯಪಲ್ಲಕ್ಕಿ ಉತ್ಸವ ಚತುರ್ವೀದಿಗಳಲ್ಲಿ ನೆರವೇರಿತು. ರಾತ್ರಿ ಚಂದ್ರಮಂಡಲ ವಾಹನೋತ್ಸವ ಸಹ ಸಂಪ್ರದಾಯದಂತೆ ನಡೆಯಿತು.

ಇಂದು ಶ್ರೀ ಕೃಷ್ಣರಾಜಮುಡಿ ಕಿರೀಟ ಧಾರಣ ಮಹೋತ್ಸವ: ಬುಧವಾರ ರಾತ್ರಿ 7ಕ್ಕೆ ಚೆಲುವನಾರಾಯಣಸ್ವಾಮಿಗೆ ಶ್ರೀ ಕೃಷ್ಣರಾಜಮುಡಿ ಕಿರೀಟ ಧಾರಣ ಮಹೋತ್ಸವ ನಡೆಯಲಿದೆ. ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯಲ್ಲಿ ಮೇಲುಕೋಟೆಗೆ ತಂದು ಹಿರಿಯ ಅಧಿಕಾರಿಗಳು ಸ್ಥಾನೀಕರು ಅರ್ಚಕ-ಪರಿಚಾರಕರ ಸಮಕ್ಷಮ ಪಾರ್ಕಾವಣೆ ಮಾಡಿ ಸ್ವಾಮಿಗೆ ತೊಡಿಸಲಾಗುತ್ತದೆ.