ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ 25 ವರ್ಷಗಳ ಕಾಲ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ತಾಲೂಕಿನ ಕೆರೆತೊಣ್ಣೂರು ಗ್ರಾಮದ ದೇವಸ್ಥಾನ ಅಭಿವೃದ್ಧಿ, ರಸ್ತೆ ಕಾಮಗಾರಿ, ಕೆರೆ ಅಭಿವೃದ್ಧಿ, ಹೊಸ ತೂಬು ನಿರ್ಮಾಣ, ಹನುಮಂತನಗರದ ಬಳಿ ಸೇತುವೆ ನಿರ್ಮಾಣ, ಲಕ್ಷ್ಮೀ ಸಾಗರ ಗ್ರಾಮದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಒಟ್ಟು 11.30 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತೊಣ್ಣೂರು ಕೆರೆ ಕೋಡಿ ಬಿದ್ದರೆ ಕೆಳಭಾಗದ ಗ್ರಾಮಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 5 ಕೋಟಿ ವೆಚ್ಚದಲ್ಲಿ ಕೆರೆಗೆ ಕೆಆರ್‌ಎಸ್ ಅಣೆಕಟ್ಟೆ ಮಾದರಿಯಲ್ಲಿ ಗೇಟ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮಳೆಗಾಲದಲ್ಲಿ ಹರಿದು ಬರುವ ಹೆಚ್ಚುವರಿ ನೀರನ್ನು ಸರಾಗವಾಗಿ ಹೊರಹಾಕಬಹುದು ಎಂದರು.
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕನಿಷ್ಠ 50 ಅಡಿ ನೀರು ಸಂಗ್ರಹವಿದ್ದರೂ, ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುವಂತೆ ರೂಪಿಸಿರುವ ಯೋಜನೆ ಅನುಷ್ಠಾನಗೊಂಡಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ಕುಡಿಯಲು ಶುದ್ದ ಕಾವೇರಿ ನೀರನ್ನು ಒದಗಿಸಲು ಯೋಜನೆ ತಯಾರಿಸಲಾಗಿದೆ ಎಂದರಲ್ಲದೆ, ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತೊಣ್ಣೂರು ಕೆರೆ ಭರ್ತಿಯಾಗಿ ಕೆರೆ ಏರಿ ಮೇಲೆ ನೀರು ಹರಿಯುವ ಪರಿಸ್ಥಿತಿ ಇತ್ತು. ನೀರಾವರಿ ಇಲಾಖೆ ತಜ್ಞರ ಅಭಿಪ್ರಾಯದಂತೆ ಕೆರೆಯ ನೀರನ್ನು ಹೊಹಾಕಲು ಕ್ರಮ ಕೈಗೊಂಡಿದ್ದಕ್ಕೆ ಕೆಲ ಕಿಡಿಗೇಡಿಗಳು ಶಾಸಕರು ಕೆರೆ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದರು. ಇಂತಹ ಜನರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಗ್ರಾಪಂ ಅಧ್ಯಕ್ಷೆ ಭಾರತಿ, ಮಾಜಿ ಅಧ್ಯಕ್ಷೆ ಶೃತಿ, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಭಾಸ್ಕರ್, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಹೇಮಾವತಿ ಎಇಇಗಳಾದ ಪುಟ್ಟಮಾಯೀಗೌಡ, ಶಾಂತಕುಮಾರ್, ಎಇಗಳಾದ ಗಣೇಶ್, ಪುನೀತ್, ಮುಖಂಡರಾದ ಕಿಟ್ಟೇಗೌಡ, ಬೆಟ್ಟೇಗೌಡ, ಎಲ್.ಡಿ.ಸಂಜಯ್, ಜಯರಾಮು, ಕೃಷ್ಣೇಗೌಡ, ಎಲ್.ಎಸ್.ರಾಜು, ಕೃಷ್ಣಮೂರ್ತಿ ಇತರರು ಇದ್ದರು.