ಹಿರೇನಲ್ಲೂರು ಹೋಬಳಿ ಮೇಲನಹಳ್ಳಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 58 ಗುಡಿಸಲುಗಳನ್ನು ತೆರವುಗೊಳಿಸಲಾಯಿತು. 
ಜಿಲ್ಲೆ

ಮೇಲನಹಳ್ಳಿಯಲ್ಲಿ 58 ಗುಡಿಸಲು ತೆರವು

ಎಸ್.ಎನ್.ರವೀಂದ್ರ

ಬೀರೂರು: ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿ ಮೇಲನಹಳ್ಳಿ ಸರ್ವೇ ನಂ.22ರಲ್ಲಿರುವ ಸುಮಾರು 5 ಎಕರೆ ಸರ್ಕಾರಿ ಬೀಳು ಭೂಮಿಯಲ್ಲಿ ನಿರ್ಮಿಸಿದ್ದ 58 ಅಕ್ರಮ ಗುಡಿಸಲುಗಳನ್ನು ಕಡೂರು ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.

ಮೇಲನಹಳ್ಳಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಕೆಲವು ರೈತರು ಉಳುಮೆ ಮಾಡುತ್ತಿದ್ದು, ಫಾರ್ಮ್ ನಂ.57ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸುಮಾರು 30 ವರ್ಷಗಳಿಂದ ಬೇಸಾಯ ಮಾಡಿಕೊಂಡಿದ್ದರೂ ಸಾಗುವಳಿ ಚೀಟಿ ದೊರೆತಿರಲಿಲ್ಲ. ಗ್ರಾಮದ ಪರಿಶಿಷ್ಟ ಜಾತಿ ನಿವೇಶನ ರಹಿತರು 5 ತಿಂಗಳ ಹಿಂದೆ ನಮಗೆ ಸರ್ಕಾರದಿಂದ ಯಾವುದೇ ನಿವೇಶನ ನೀಡಿಲ್ಲ. ಆದ್ದರಿಂದ ನಮಗೆ ಸರ್ಕಾರಿ ಬೀಳು ಭೂಮಿಯಲ್ಲಿ ನಿವೇಶನ ನೋಂದಾಯಿಸಿಕೊಡಿ ಎಂದು ಒತ್ತಾಯಿಸಿ ಪರ-ವಿರೋಧಗಳ ನಡುವೆ ಅನಧಿಕೃತವಾಗಿ 58 ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಇದರ ಬಗ್ಗೆ ರೈತರು ಮತ್ತು ಸ್ಥಳೀಯರಿಂದ ಬಂದ ದೂರುಗಳನ್ವಯ ಕಂದಾಯ ಇಲಾಖೆ ಅಧಿಕಾರಿಗಳು ಗುಡಿಸಲುಗಳನ್ನು ತೆರವು ಮಾಡುವಂತೆ ಸೂಚಿಸಿದ್ದರು. ಆದರೆ ನಿವೇಶನರಹಿತರು ನಮಗೆ ಆಶ್ರಯವಿಲ್ಲದೆ ಜೀವನ ಸಾಗಿಸುತ್ತಿದ್ದೇವೆ. ಆದ್ದರಿಂದ ಸರ್ಕಾರಿ ಬೀಳು ಭೂಮಿಲ್ಲಿ ವಸತಿ ಕಲ್ಪಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದರಿಂದ ತೆರವು ಮಾಡಿರಲಿಲ್ಲ.

ಶನಿವಾರ ಕಡೂರು ತಹಸೀಲ್ದಾರ್ ಪೂರ್ಣಿಮಾ ಹಾಗೂ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದಲ್ಲಿ 58 ಗುಡಿಸಲುಗಳನ್ನು ತೆರವುಗೊಳಿಸಿದರು.

ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಕಂದಾಯ ಪಾವತಿಸದೆ ಸಾಗುವಳಿ ಮಾಡುತ್ತಿದ್ದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಪರಿಶಿಷ್ಟ ಜಾತಿಯವರು ನಿವೇಶನಕ್ಕೆ ಒತ್ತಾಯಿಸಿರುವ ಕಾರಣ 94ಸಿಯಲ್ಲಿ ನಿವೇಶನ ರಹಿತರನ್ನು ಪಟ್ಟಿ ಮಾಡಲು ಆದೇಶಿಸಲಾಗಿದೆ. ನಂತರ ಅವರಿಗೆ ವಸತಿ ಕಲ್ಪಿಸಲಾಗುವುದು. ಅಲ್ಲದೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಅರ್ಜಿಗಳನ್ನು ಬಗರ್‌ಹುಕುಂ ಸಮಿತಿ ಮುಂದೆ ಇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ರಾಜಸ್ವ ನಿರೀಕ್ಷಕ ರವಿ, ಕಂದಾಯ ಇಲಾಖೆ ಅಧಿಕಾರಿಗಳು, ಪಿಎಸ್‌ಐ ಸಜಿತ್‌ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.