ಜಿಲ್ಲೆ

ಮೇಯರ್ ವಿರುದ್ಧ ಪ್ರಾದೇಶಿಕ ಆಯುಕ್ತರಿಗೆ ದೂರು

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ದುರುದ್ದೇಶದಿಂದ ಮುಂದೂಡಿರುವ ಮೇಯರ್ ಶಿವಕುಮಾರ್ ವಿರುದ್ಧ ಪ್ರಾದೇಶಿಕ ಆಯುಕ್ತರಿಗೆ ಕಾಂಗ್ರೆಸ್ ನಗರ ಸಮಿತಿ ಶನಿವಾರ ದೂರು ನೀಡಿದೆ.


ಕಾಂಗ್ರೆಸ್ ನಿಯೋಗವು ಆರ್‌ಸಿ ಕಚೇರಿಗೆ ಭೇಟಿ ನೀಡಿ ದೂರಿನ ಪ್ರತಿಯನ್ನು ಹೆಚ್ಚುವರಿ ಆಯುಕ್ತ ಪಿ.ಶಿವರಾಜು ಅವರಿಗೆ ನೀಡಿದೆ. ಕೂಡಲೇ ಈ ಚುನಾವಣೆ ನಡೆಸಲು ಪಾಲಿಕೆ ಆಯುಕ್ತರಿಗೆ ಸೂಚಿಸಬೇಕು ಎಂದೂ ಆಗ್ರಹಿಸಿದೆ.


ಜ.2ರಂದು ಬೆಳಗ್ಗೆ 10.30ಕ್ಕೆ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಆದರೆ, ಮೇಯರ್ ಅವರು ಮಧ್ಯಾಹ್ನ 12 ಗಂಟೆಯಾದರೂ ಸಭಾಂಗಣಕ್ಕೆ ಬಾರದೆ ಅವರ ಕಚೇರಿಯಲ್ಲಿ ಕುಳಿತಿದ್ದರು. ಬಳಿಕ ಬಂದ ಅವರು ಏಕಾಏಕಿ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಣೆ ಮಾಡಿ ಹೊರಟು ಹೋಗಿದ್ದರು. ನಿರ್ದಿಷ್ಟ ಕಾರಣವನ್ನು ನೀಡದೆ ಚುನಾವಣೆಯನ್ನು ಮುಂದೂಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ದೂರಲಾಗಿದೆ.


ಇದು ಮುನ್ಸಿಪಲ್ ಕಾಯ್ದೆಗೆ ವಿರುದ್ಧವಾಗಿದೆ. ಈ ಮೇಯರ್ ಅವಧಿಗಿಂತ ಮುಂಚೆಯೇ ಕಳೆದ 14 ತಿಂಗಳಿಂದ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಚುನಾವಣೆ ನಡೆದಿಲ್ಲ. ಈ ಮೂಲಕ ಕಾನೂನು ಉಲ್ಲಂಘಿಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಲಾಗಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ದೂರಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.


ಸ್ಥಾಯಿ ಸಮಿತಿಗಳು ಕಾನೂನಾತ್ಮಕವಾದ ಹಕ್ಕುಗಳನ್ನು ಹೊಂದಿರುವ ಸಮಿತಿಗಳಾಗಿವೆ. ಈ ಸಮಿತಿಗಳು ಇಲ್ಲದಿರುವುದರಿಂದ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲಾಗುತ್ತಿಲ್ಲ. ಹೊಸ ಯೋಜನೆಗಳಿಗೆ ಅನುಮೋದನೆ ನೀಡಲು ಆಗುತ್ತಿಲ್ಲ. ಇದರಿಂದ ತೆರಿಗೆ ಕಟ್ಟುವ ನಾಗರಿಕರಿಗೆ ವಂಚಿಸಿದ ಹಾಗೆ ಆಗಿದೆ ಎಂದೂ ಆರೋಪಿಸಲಾಗಿದೆ.


ಪಾಲಿಕೆಯ 2023-24ನೇ ಸಾಲಿನ ಬಜೆಟ್ ಮಂಡಿಸಬೇಕಾಗಿದೆ. ಆದ್ದರಿಂದ ಸ್ಥಾಯಿ ಸಮಿತಿಗಳಿಲ್ಲದೆ ಒಪ್ಪಿಗೆ ಪಡೆಯಲು ತೊಂದರೆಯಾಗುತ್ತದೆ. ಕೂಡಲೇ ಈ ಚುನಾವಣೆ ನಡೆಸಲು ಸೂಚಿಸಬೇಕು ಎಂದು ಆಗ್ರಹಿಸಲಾಗಿದೆ.


ಪಕ್ಷದ ನಗರಾಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಸದಸ್ಯರಾದ ಅಯೂಬ್ ಖಾನ್, ಎಚ್.ಎಂ. ಶಾಂತಕುಮಾರಿ, ಗೋಪಿ, ವಿ.ಶ್ರೀಧರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇನ್ನಿತರರು ಈ ಸಂದರ್ಭದಲ್ಲಿದ್ದರು.