ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ಜೂ.21 ರಂದು ಚುನಾವಣೆ ನಡೆಸಲು ಕಲ್ಬುರ್ಗಿ ಪ್ರಾದೇಶಿಕ ಆಯಕ್ತ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಮೇಯರ್ ಖಾಲಿಯಿದ್ದ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಪತ್ರ ಬರೆದು ಮನವಿ ಮಾಡಿದ್ದರು. ಮಾರ್ಚ್ ತಿಂಗಳ ಕೊನೆಯಲ್ಲಿಯೇ ಚುನಾವಣೆ ನಡೆಸಬೇಕಿತ್ತು. ಆದರೆ, ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಿಂದಾಗಿ ದಿನಾಂಕ ಮುಂದೂಡಲಾಗಿತ್ತು. ಈ ಬಾರಿಯ ಮೇಯರ್ ಸಾಮಾನ್ಯ ವರ್ಗಕ್ಕೆ ಇದ್ದು, ಮೇಯರ್ ಹಲವರು ಅಕಾಂಕ್ಷಿಗಳಿದ್ದು ಪೈಪೋಟಿ ಹೆಚ್ಚಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಮೇಯರ್ ಸ್ಥಾನದ ಅಕಾಂಕ್ಷಿಗಳ ಸಭೆಯನ್ನು ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಶಾಸಕ ಭರತರೆಡ್ಡಿ ಕರೆದಿದ್ದರು. ಸಭೆಯಲ್ಲಿ ಅಕಾಂಕ್ಷಿಗಳಿಂದ ಅರ್ಜಿ ಪಡೆದು ಕೆಪಿಸಿಸಿಗೆ ಕಳುಹಿಸಲಾಗಿದೆ. ಸಿಎಂ, ಡಿಸಿಎಂ, ನಗರಾಭಿವೃದ್ಧಿ ಸಚಿವರಿಗೆ ಕಳುಹಿಸಿ, ಬಳಿಕ ಕಾಂಗ್ರೆಸ್ ಪಾಲಿಕೆ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಪಡೆಯುವುದು. ಪಕ್ಷದ ಮುಖಂಡರು ಪಕ್ಷಕ್ಕೆ ಯಾರ ಸೇವೆ ಏನು ಎಂದು ಪರಿಗಣಿಸಿ ಮೇಯರ್ ಮಾಡಲು ಸೂಚಿಸುತ್ತಾರೆ. ಅಲ್ಲಿಯವರೆಗೆ ಡಿಸಿಸಿ ಹಾಗೂ ಪಾಲಿಕೆ ಸದಸ್ಯರು ಕಾದು ನೋಡಲಿದ್ದೇವೆ ಎಂದು ಅಕಾಂಕ್ಷಿಯೊಬ್ಬರು ತಿಳಿಸಿದರು.