ಜಿಲ್ಲೆ

ಮೇಯರ್ ಇಲ್ಲದೆ ಅಭಿವೃದ್ಧಿ ಮರೀಚಿಕೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಕಳೆದ ಎರಡು ವರ್ಷದಲ್ಲಿ ಇಲ್ಲಿನ ಮಹಾನಗರ ಪಾಲಿಕೆಯು ಮೂವರು ಮೇಯರ್ ಯಾಗಿ ಅಧಿಕಾರ ಚಲಾಯಿಸಿದ್ದರೂ, ನಗರದಲ್ಲಿ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ನಗರ ನಿವಾಸಿಗಳು ಹೈರಾಣಾಗಿದ್ದಾರೆ. ಇಲ್ಲಿನ ಚರಂಡಿಯ ಸಮಸ್ಯೆಯ ಹಲವು ಮುಖಗಳನ್ನು ತೆರೆದಿಟ್ಟಿದೆ. ಕೊಳೆಗೇರಿಗಳಲ್ಲಂತೂ ಮಳೆ ಎಂದರೆ ಜನ ನಡುಗುವಂತಾಗಿದೆ. ಇನ್ನೂಂದೆಡೆ ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ತುಂಬಿದ್ದು, ಕೆಸರು ಗದ್ದೆಯಂತಾಗುತ್ತಿವೆ. ನಿತ್ಯ 155 ಟನ್ ಗಿಂತ ಅಧಿಕ ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಬಹುತೇಕ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ಕಸದಿಂದ ಕೂಡಿವೆ. ಚರಂಡಿಯಲ್ಲಿನ ಕಸದಿಂದಾಗಿ ನೀರು ಹರಿದು ಹೋಗದೆ ಜನವಸತಿ ಪ್ರದೇಶಗಳತ್ತ ನುಗ್ಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಬದುಕೇ ದುಸ್ತರ ಎಂಬಂತಾಗಿದೆ. ನಗರದ ಹಲವು ರಸ್ತೆಗಳು ಗುಂಡಿ ಬಿದ್ದಿವೆ. ಸದ್ಯ ಮಳೆಯಿಂದಾಗಿ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ನೀರು ನಿಂತು ಜನ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿವೆ. ಪಾಲಿಕೆಯು ಕೂಡಲೇ ಗುಂಡಿ ಮುಚ್ಚಿಸುವ ಕೆಲಸ ಆರಂಭಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ. ಶುಕ್ರವಾರ ಒಂದು ಗಂಟೆ ಮಳೆಗೆ ಜನರು ಬೆಚ್ಚು ಬಿದ್ದಿದ್ದಾರೆ. ಕೆಲ ತಿಂಗಳ ಹಿಂದಯೇ ದುರಸ್ತಿಗೊಳಿಸಲಾಗಿದ್ದ ಎಸ್‌ಎನ್ ಪೇಟೆ ಹಾಗೂ ದುರ್ಗಮ್ಮ ಗುಡಿಯ ರೈಲ್ವೆ ಕೆಳ ಸೇತುವೆಯ ಅಪಾರ ಪ್ರಮಾಣದ ನೀರು ನಿಂತು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸೇತುವೆ ಕೆಳಗಡೆ ಸರ್ಕಾರಿ ಬಸ್, ಕೆಲ ಖಾಸಗಿ ವಾಹನಗಳು ಬಸ್ ಕೆಟ್ಟು ನಿಂತವು. ಜಿಲ್ಲಾ ಕ್ರೀಡಾಂಗಣದ ರೈಲ್ವೆ ಕೆಳ ಸೇತುವೆಯಲ್ಲಿ ಅಂಬ್ಯುಲೆನ್ಸ್ ಸಂಚಾರಿಸು ವೇಳೆ ಸೇತುವೆ ಕೆಳಗಡೆ ಕೆಟ್ಟು ನಿಂತಿತು, ಸ್ಥಳಿಯರು ಅದನ್ನು ತಳ್ಳಿಕೊಂಡು ಸೇತುವೆ ದಾಟಿಸಿದ ಪ್ರಸಂಗ ನಡೆಯಿತು. ಇದಲ್ಲದೆ ಕಳೆದ ಮೂರು ವರ್ಷದಿಂದ ನಗರದ ಅನಂತಪುರ ರಸ್ತೆಯ ಅಗಲೀಕರಣ ಕಾಮಗಾರಿ ಅಮೆಗಾತಿಯಲ್ಲಿ ಸಾಗುತ್ತಿದೆ. ಪಾಲಿಕೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪಾಲಿಕೆಗೆ ಕಳೆದ ಎರಡು ವರ್ಷದಲ್ಲಿ ಮೂವರು ಮೇಯರ್ ಆಗಿ, ಇಬ್ಬರು ಉಪಮೇಯರ್ ಆಗಿ ಅಧಿಕಾರ ಚಲಾಯಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನಗರದಲ್ಲಿ ಎರಡು ವರ್ಷದಲ್ಲಿ ಹೇಳಿಕೊಳ್ಳವಂತ ಒಂದು ಕಾಮಗಾರಿ ಪೂರ್ಣಗೊಂಡಿಲ್ಲ. ಪಾಲಿಕೆ ವ್ಯಾಪ್ತಿಯ 39 ವಾರ್ಡ್‌ಗಳ ಪೈಕಿ 21 ಕಾಂಗ್ರೆಸ್, 13 ಬಿಜೆಪಿ ಹಾಗೂ ಐವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷೇತರ ಸದಸ್ಯರ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮೊದಲನೇ ಅವಧಿಗೆ ರಾಜೇಶ್ವರಿ ಸುಬ್ಬರಾಯಡು, 2ನೇ ಅವಧಿಗೆ ಡಿ. ತ್ರಿವೇಣಿ, ಮೂರನೇ ಅವಧಿಗೆ ಬಿ. ಶ್ವೇತಾ ಮೇಯರ್ ಆಗಿದ್ದರು. ಮೀಸಲಾತಿ ಬದಲಾವಣೆಯೊಂದಿಗೆ ಪುನಃ ಮೇರ್, ಉಪಮೇಯರ್ ಯ್ಕೆಗೆ ಮಾ. 28 ರಂದು ದಿನಾಂಕ ನಿಗದಿಪಡಿಸಿ ಕಲಬುರಗಿ ವಿಭಾಗದ ಆಯುಕ್ತರಿಂದ ಆದೇಶ ಹೊರಡಿಸಲಾಗಿತ್ತು. ಆದರೆ, ಪಾಲಿಕೆ ಗದ್ದುಗೆಗೆ ಪಡೆಯಲು ಕಾಂಗ್ರೆಸ್ ಸದಸ್ಯರಲ್ಲಿಯೇ ತೀವ್ರ ಪೈಪೋಟಿ ನಡೆದಿದ್ದರಿಂದ ಲೋಕಸಭಾ ಚುನಾವಣೆ ಕಾರಣ ನೀಡಿ ಚುನಾವಣೆ ಮುಂದೂಡಿತು. ಸದ್ಯ ಮೇಯರ್ ಸ್ಥಾನಕ್ಕೆ ಪಾಲಿಕೆ ಸದಸ್ಯರಾದ ಎಂ. ಪ್ರಭಂಜನ್ ಕುಮಾರ, ಪಿ.ಗಾದೆಪ್ಪ, ಮುಲ್ಲಂಗಿ ನಂದೀಶ್, ಪೇರಂ ವಿವೇಕ್ ವಿಕ್ಕಿ ಸೇರಿದಂತೆ ಇನ್ನೂ ಅಕಾಂಕ್ಷಿಗಳಿದ್ದಾರೆ. ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸಿ ನಗರಾಭಿವೃದ್ಧಿ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.