ರಾಮನಗರ: ಕಳೆದೊಂದು ವಾರದಿಂದ ಮೇಕೆದಾಟು ಹೋರಾಟದಲ್ಲಿ ಮುಳುಗಿದ್ದ ರಾಮನಗರ ಜಿಲ್ಲೆ ಈಗ ಸಾಮಾನ್ಯ ಸ್ಥಿತಿ ಮರಳಿದೆ. ಆದರೆ, ಪಾದಯಾತ್ರೆಗೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸುವ ಮೂಲಕ ಹೋರಾಟದ ಕುರುಹುಗಳನ್ನು ರಾಮನಗರ ನಗರಸಭೆ ಶುಕ್ರವಾರ ಅಳಿಸಿ ಹಾಕಿತು.
ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆಗ್ರಹಿಸಿ ಕೆಪಿಸಿಸಿ ಆಯೋಜಿಸಿದ್ದ ಪಾದಯಾತ್ರೆಯನ್ನು ಹೈಕೋರ್ಟ್ ಚಾಟಿ ಹಾಗೂ ಸರ್ಕಾರದ ನಿರ್ದೇಶನದ ಮೇರೆಗೆ ತಡೆಹಿಡಿಯಲಾಗಿತ್ತು. ಆದರೆ, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವವರಿಗೆ ಮಾರ್ಗ ಸೂಚಕವಾಗಿ ಪಾದಯಾತ್ರೆ ಸಾಗುವ ರಸ್ತೆಯ ಎರಡು ಬದಿಯಲ್ಲಿ ಕಾಂಗ್ರೆಸ್ ಬಾವುಟ, ಕರ್ನಾಟಕ ಬಾವುಟ ಹಾಗೂ ಮೇಕೆದಾಟು ಇರುವ ಚಿತ್ರಗಳ ಧ್ವಜಗಳನ್ನು ನೆಡಲಾಗಿತ್ತು. ಜತೆಗೆ, ಶುಭಾಶಯ ಹಾಗೂ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಏಕಾಏಕಿ ಯಾತ್ರೆಗೆ ತಡೆಯಾಜ್ಞೆ ನೀಡಿದ ಕಾರಣ ಶುಕ್ರವಾರ ಬೆಳಗ್ಗೆಯೇ ಇವುಗಳನ್ನು ತೆರವು ಮಾಡುವ ಕಾರ್ಯ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬೆಂಗಳೂರು - ಮೈಸೂರು ಸೇರಿ ಈ ಹಿಂದೆ ಪಾದಯಾತ್ರೆ ಸಾಗಿ ಬಂದಿದ್ದ ಮಾರ್ಗದಲ್ಲಿ ಅಳವಡಿಸಿದ್ದ ಎಲ್ಲ ಬ್ಯಾನರ್‌ಗಳು ಹಾಗೂ ಬಾವುಟಗಳನ್ನು ತೆರವು ಮಾಡಲಾಗುತ್ತಿದೆ. ಬಾವುಟ ನಡುವ ಕಾರ್ಯಕ್ಕೆ ಮದ್ರಾಸ್ ಮೂಲದ ಕಂಪನಿಗೆ ವಹಿಸಿಕೊಡಲಾಗಿತ್ತು. ಇನ್ನು ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದ್ದ ಕಾರ್ಯಕರ್ತರಿಗೆ ಮಜ್ಜಿಗೆ ವಿತರಿಸಲಾಗಿತ್ತು. ಆದರೆ, ಮಜ್ಜಿಗೆ ಕುಡಿದು ಕಪ್‌ಗಳನ್ನು ಅಲ್ಲಿಯೇ ಬಿಸಾಡಲಾಗಿತ್ತು. ಅದನ್ನು ಇಂದು ಸ್ವಚ್ಛಗೊಳಿಸಲಾಯಿತು.