ಜಿಲ್ಲೆ

ಮೇಕೆದಾಟಿನಿಂದ ನೀರಿನ ಸಮಸ್ಯೆ ದೂರ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಅಭಿಮತ, ಸಚಿವರ ವರ್ತನೆ ವಿರುದ್ಧ ಬೇಸರ

Bengaluru Rural

ನೆಲಮಂಗಲ: ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆಯ ಹೋಟೆಲ್ ಹಾಲಿಡೇ ಪಾಮ್ಸ್‌ನಲ್ಲಿ ಕಾಂಗ್ರೆಸ್ ಬ್ಲಾಕ್ ಸಮಿತಿ ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಹಳೇ ಮೈಸೂರು ಭಾಗದ ನಾಲ್ಕೈದು ಜಿಲ್ಲೆಯ ಜನರ ಕುಡಿಯುವ ನೀರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟು ಸಹಕಾರಿ. ಸಮುದ್ರಕ್ಕೆ ಸಾಕಷ್ಟು ನೀರು ವ್ಯರ್ಥವಾಗಿ ಹರಿಯುತ್ತಿದೆ. ಈ ಭಾಗದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದೂರ ದೃಷ್ಟಿ ಇಟ್ಟಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜನರ ಅನುಕೂಲಕ್ಕಾಗಿ ಯೋಜನೆ ಕೈಗೊಂಡಿದ್ದು, ಲಕ್ಷಾಂತರ ಮಂದಿ ಬೆಂಬಲ ನೀಡಿದ್ದಾರೆ ಎಂದರು.

ದೆವ್ವ ಬಂದ ರೀತಿ ವರ್ತನೆ: ಇತ್ತೀಚೆಗೆ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್‌ನಾರಾಯಣ್ ಉದ್ವೇಗದ ಮಾತುಗಳನ್ನು ಜನತೆ ನೋಡಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಮಾತನಾಡುವ ಮುನ್ನ ಮಾತಿನ ಮೇಲೆ ಹಿಡಿತವಿರಬೇಕು. ಮುಖ್ಯಮಂತ್ರಿಗಳು ಹಾಗೂ ವಿವಿಧ ಜನಪ್ರತಿನಿಧಿಗಳು ಇರುವ ವೇದಿಕೆಯಲ್ಲಿ ದೆವ್ವ ಬಂದ ರೀತಿ ಅಶ್ವತ್ಥ್‌ನಾರಾಯಣ್ ವರ್ತನೆ ತೋರಿದ್ದಾರೆ. ಅವರು ಮಾಡಿದ್ದು ಅವರ ಪಕ್ಷದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಎಸ್.ರವಿ ಟೀಕಿಸಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಮ್ಮ ರಾಜ್ಯದಿಂದ ತಮಿಳುನಾಡಿಗೆ ಹೋಗುವ ನೀರನ್ನು ಹೊರತುಪಡಿಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮಾತ್ರ ಅಣೆಕಟ್ಟು ನಿರ್ಮಾಣ ಮಾಡಲು ಒತ್ತಾಯ ಮಾಡಲಾಗುತ್ತಿದೆ. ಪಾದಯಾತ್ರೆ ಗ್ರಾಮಾಂತರ ಜಿಲ್ಲೆಯಿಂದ 40 ಸಾವಿರಕ್ಕೂ ಹೆಚ್ಚು ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕರ್ಫ್ಯೂ ಬಗ್ಗೆ ವಿರೋಧ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಮಾಡುವ ವೇಳೆ ಕರೊನಾ ಮತ್ತು ಒಮಿಕ್ರಾನ್ ಸೋಂಕು ಕಾಣುವುದಿಲ್ಲ. ಕೆಪಿಸಿಸಿಯಿಂದ ಪಾದಯಾತ್ರೆಗೆ ಸಮಯ ನಿಗದಿ ಮಾಡಿದ ವೇಳೆ ರಾಜಕೀಯವನ್ನು ಮುಂದಿಟ್ಟುಕೊಂಡು ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. ನಿತ್ಯ 1 ಸಾವಿರ ಕೋವಿಡ್ ಪ್ರಕರಣ ದಾಖಲಾಗಿದ್ದು, 2 ದಿನಗಳಲ್ಲಿ 5 ಸಾವಿರ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ 5 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿರುವ ನಿಖರ ಮಾಹಿತಿಯನ್ನು ತಿಳಿಸಿಬೇಕು ಎಂದು ರವಿ ಆಗ್ರಹಿಸಿದರು.

ಕಾಂಗ್ರೆಸ್ ಸಮಿತಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿಸ್ವಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ನಾಗರಾಜು, ಜಗದೀಶ್, ರಂಗಸ್ವಾಮಿ, ನಗರಸಭೆ ಸದಸ್ಯ ಗಂಗಾಧರ್‌ರಾವ್, ಕೆಪಿಸಿಸಿ ಸದಸ್ಯ ಖಲೀಂಮುಲ್ಲಾ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನಾಗರತ್ನಾ, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿ.ಆರ್.ಗೌಡ, ಜಿಪಂ ಮಾಜಿ ಸದಸ್ಯ ಮುನಿಯಪ್ಪ, ಮುಖಂಡರಾದ ದೀಪಕ್‌ಕಿರಣ್, ಕೃಷ್ಣಮೂರ್ತಿ, ಸಿ.ಎಂ.ಗೌಡ, ಎಂ.ನಾರಾಯಣ್‌ಗೌಡ ಮತ್ತಿತರರು ಇದ್ದರು.