ತೀವ್ರ ಕುತೂಹಲ ಮೂಡಿಸಿರುವ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ 8ರಂದು ಸಂಜೆ 6ಕ್ಕೆ ತೆರೆ ಬೀಳಲಿದೆ.
ಆ ಬಳಿಕ ‘ಶೂನ್ಯ ಅವಧಿ’ ಎಂದು ಚುನಾವಣಾ ಆಯೋಗ ಪರಿಗಣಿಸುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಅಬ್ಬರದ ಪ್ರಚಾರಗಳೆಲ್ಲವೂ ಸೋಮವಾರ ಸಂಜೆ 6 ಗಂಟೆಯೊಳಗೆ ಕೊನೆಗೊಳ್ಳಬೇಕಿದೆ.
ಬಹಿರಂಗ ಪ್ರಚಾರ ಮುಗಿದ ಬಳಿಕ ಸ್ಟಾರ್ ಪ್ರಚಾರಕರು, ವಿವಿಧ ಪಕ್ಷಗಳ ಮುಖಂಡರು ಕ್ಷೇತ್ರ ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಜೆಯ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಸೂಚನೆ ನೀಡಿದೆ.
ಬಹಿರಂಗ ಪ್ರಚಾರ ಅಂತ್ಯದ ಬಳಿಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಮಾತ್ರ ಅವಕಾಶವಿದೆ. ಮೇ 10ರಂದು ಮತದಾನ ನಡೆಯಲಿದೆ.
ಕಣದಲ್ಲಿ 143 ಅಭ್ಯರ್ಥಿಗಳು:
ಜಿಲ್ಲೆಯ 11 ಕ್ಷೇತ್ರಗಳ ಕಣದಲ್ಲಿ ಒಟ್ಟು 143 ಅಭ್ಯರ್ಥಿಗಳು ಇದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ 10, ಕೃಷ್ಣರಾಜನಗರದಲ್ಲಿ 8, ಹುಣಸೂರು 12, ನಂಜನಗೂಡು 12, ಎಚ್.ಡಿ.ಕೋಟೆ 12, ಚಾಮುಂಡೇಶ್ವರಿ 14, ಕೃಷ್ಣರಾಜ 17, ಚಾಮರಾಜ 14, ನರಸಿಂಹರಾಜ 17, ತಿ.ನರಸೀಪುರ 12, ವರುಣ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಜಯಕ್ಕಾಗಿ ಹೋರಾಟ ನಡೆಸಿದ್ದಾರೆ.
ಪ್ರತಿಬಂಧಕಾಜ್ಞೆ ಜಾರಿ:
ಚುನಾವಣೆ ನಿಮಿತ್ತ ಮೇ 8ರಂದು ಸಂಜೆ 6ರಿಂದ ಮೇ 10 ರಂದು ಮತದಾನ ಮುಕ್ತಾಯವಾಗುವವರೆಗೂ ನಗರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳ ಸುತ್ತಲೂ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೆ ಬರಲಿದೆ
ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಆಯೋಜನೆ ಮಾಡುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯಾರೂ ಸೇರುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸೂಚಿಸಿದ್ದಾರೆ.