ಚಿತ್ರದುರ್ಗ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಪರಿಷತ್ ಜಿಲ್ಲಾ ಶಾಖೆ, ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಸಂಯುಕ್ತಾಶ್ರಯದಲ್ಲಿ ಶ್ರೀಮಠದ ಆವರಣದಲ್ಲಿ ಮೇ 4ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ-ಸಂಸ್ಕೃತಿ ಕಮ್ಮಟಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಲಿದ್ದಾರೆ.
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಜ್ಯಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ.
4ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಕಮ್ಮಟಕ್ಕೆ ನೋಂದಾಯಿಸಿದ ವಿವಿಧ ಜಿಲ್ಲೆಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿವಿಧ ವಿಷಯಗಳ ಪರಿಣಿತರು, ಹಿರಿಯ ಸಾಹಿತಿಗಳು ಸಹಿತ 30 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಕಮ್ಮಟದಲ್ಲಿ ಮಕ್ಕಳಿಗೆ ನಾಟಕ ರಚನೆ, ಕಥೆ, ಕವನ ರಚನೆ, ನೃತ್ಯ, ಹಸೆ ಚಿತ್ತಾರ ಸೇರಿ ಜಾನಪದ ಹಾಗೂ ಸುಗಮ ಸಂಗೀತ ತರಬೇತಿ,ಮೂಲ ಜಾನಪದ ನೃತ್ಯ, ಯಕ್ಷಗಾನ, ಮಲ್ಲ ಕಂಬ ಮುಂತಾದ ನಾಡಿನ ಅನೇಕ ಕಲೆ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸಲಾಗುವುದು.
ಚಿತ್ರದುರ್ಗ ಜಿಲ್ಲೆಯಿಂದ 30 ವಿದ್ಯಾರ್ಥಿಗಳು,ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ. ನಟರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ. ರಾಜ್ಯಮಕ್ಕಳ ಸಾಹಿತ್ಯ ಪರಿಷತ್ ಮಹಾ ಪೋಷಕರಾದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಉಪಸ್ಥಿತರಿರುವರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮೇ 6ರಂದು ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.