ನೆಲಮಂಗಲ: ನಗರದಲ್ಲಿ ಮೇ 3ರಂದು ವಿಜೃಂಭಣೆಯ ಬಸವ ಜಯಂತಿ ಹಾಗೂ ‘ಪವಾಡಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಬಸವ ಜಯಂತಿ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಮುಖಂಡರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
12ನೇ ಶತಮಾನದ ಶ್ರೇಷ್ಠ ವಚನಕಾರ ಬಸವೇಶ್ವರ ಅವರು ಸಮಾಜದ ಎಲ್ಲ ವರ್ಗಗಳ ಕಲ್ಯಾಣಭಿವೃದ್ಧಿಗೆ ಶ್ರಮಿಸಿದ್ದರು. ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುವ ಬಸವೇಶ್ವರರ ಸಂದೇಶ ಮತ್ತು ತತ್ವಗಳ ಪ್ರಚಾರ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಮಠದಿಂದ ಅದ್ದೂರಿಯಾಗಿ ಜಯಂತಿ ಆಚರಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಈಗಾಗಲೇ ಕಾರ್ಯಕ್ರಮದ ಬಹಿರಂಗ ಪ್ರಚಾರದ ಜತೆಗೆ ನಾಡಿನ ವಿವಿಧ ಹರಗುರುಚರಮೂರ್ತಿಗಳಿಗೆ ಆಹ್ವಾನ ನೀಡಲಾಗಿದೆ. ತಾಲೂಕಿನ ಎಲ್ಲ ಸ್ವಯಂ ಸೇವಾ ಸಂಸ್ಥೆಗಳಲ್ಲದೆ ಕನ್ನಡಪರ, ರೈತಪರ ಸಂಘಟನೆಗಳನ್ನೂ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸವಣ್ಣ ದೇವರ ರಥೋತ್ಸವ: ಶ್ರೀ ಮಠದಲ್ಲಿ ಮೇ 3ರ ಬೆಳಗ್ಗೆ 10.30ಕ್ಕೆ ಕ್ಷೇತ್ರಾಧಿಪತಿ ಪವಾಡ ಶ್ರೀ ಬಸವಣ್ಣ ದೇವರ ರಥೋತ್ಸವ ಸಂಜೆ 5 ಗಂಟೆಗೆ ಅಶ್ವಾರೂಢ ಜಗಜ್ಯೋತಿ ಶ್ರೀ ಬಸವೇಶ್ವರ ಉತ್ಸವಮೂರ್ತಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. 2021ನೇ ಸಾಲಿನ ಪವಾಡಶ್ರೀ ಪ್ರಶಸ್ತಿಯನ್ನು ವಿಜಯಪುರದ ಸಾಹಿತಿ ರಂಜಾನ್ ದರ್ಗಾ ಅವರಿಗೆ ಹಾಗೂ 2022ನೇ ಸಾಲಿನ ಪ್ರಶಸ್ತಿಯನ್ನು ಮಣಿಪಾಲ್ ಆಸ್ಪತ್ರೆಯ ಬೆನ್ನುಮೂಳೆ ಶಸಚಿಕಿತ್ಸಾ ತಜ್ಞ ಡಾ. ವಿದ್ಯಾಧರ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕಿ ಮಂಜುಳಾ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಮೇಶ್, ವೀರಶೈವ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಕೆಪಿಸಿಸಿ ಸದಸ್ಯ ಖಲೀಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಕಸಾಪ ಅಧ್ಯಕ್ಷ ಪ್ರದೀಪ್, ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್‌ಗೌಡ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಜನಸೈನ್ಯ ಸಂಘಟನೆ ಸಂಸ್ಥಾಪಕ ನರಸಿಂಹಯ್ಯ, ರಾಜ್ಯಾಧ್ಯಕ್ಷ ನವೀನ್, ವಕೀಲ ರಘುನಾಥ್, ಮುಖಂಡರಾದ ದಯಾಶಂಕರ್, ಕೆ.ಪಿ.ಬೃಂಗೀಶ್, ಎನ್.ಆರ್. ಜಗದೀಶ್, ಗಂಗಬೈಲಪ್ಪ, ರಾಮಕೃಷ್ಣಪ್ಪ, ಎಚ್.ಕೆ.ಲೋಕೇಶ್, ಎಚ್.ಪಿ.ಮಹೇಶ್, ಬೈಯಂಡಹಳ್ಳಿ ಮಲ್ಲೇಶಯ್ಯ, ಭೂನ್ಯಾಮಂಡಳಿ ಸದಸ್ಯ ಎಚ್.ಬಸವರಾಜು, ಪ್ರಾಂಶುಪಾಲ ಕುಮಾರಸ್ವಾಮಿ ಮತ್ತಿತರರಿದ್ದರು.