ಜಿಲ್ಲೆ

ಮೇ 23ರಂದು ಜಾಗೃತಿಗೆ ವಾಕಥಾನ್

ಚಾಮರಾಜನಗರ: ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಮೇ 23ರಂದು ಬೆಳಗ್ಗೆ 7.30 ಗಂಟೆಗೆ ಚಾಮರಾಜನಗರ ಪಟ್ಟಣದಲ್ಲಿ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 7.30 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಬಳಿ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ವಿಶೇಷವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕಥಾನ್ ನಡೆಸಲಾಗುತ್ತಿದೆ.

ಬಾಲ್ಯವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಠ ಸಾಮಾಜಿಕ ಪದ್ಧತಿಯಾಗಿದ್ದು ಈ ಶತಮಾನದಲ್ಲಿಯೂ ಮುಂದುವರೆದಿರುವುದು ತುಂಬಾ ಶೋಚನೀಯವಾಗಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಈ ಅಪಾಯಕಾರಿ ಪದ್ದತಿಯು ಎಳೆ ತಾಯಂದಿರ ಮರಣ, ಶಿಶು ಮರಣ, ಅಪೌಷ್ಟಿಕತೆಯನ್ನುಂಟು ಮಾಡುವುದಲ್ಲದೇ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ತೊಂದರೆಯಾಗುತ್ತಿದೆ.

ಜಿಲ್ಲಾಡಳಿತ ಬಾಲ್ಯವಿವಾಹ ಮುಕ್ತ ಜಿಲ್ಲೆ ಘೋಷಣೆಗೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸಹಯೋಗದೊಂದಿಗೆ ನಡೆಸಿದೆ. ಸಭೆಯಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿಗಳದ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.