ಜಿಲ್ಲೆ

ಮೇ.20 ರಂದು ಅಂಗನವಾಡಿ ನೌಕರರಿಂದ ಮುಷ್ಕರ

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ.20 ರಂದು ಅಂಗನವಾಡಿ ಕಾರ್ಯಕರ್ತರು ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ತಿಳಿಸಿದರು.

ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ, ಈ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ನಿರಂತರವಾಗಿ ಕೇಳಲಾಗುತ್ತಿದೆ. ಅದಾಗ್ಯೂ ನಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ ಅಂಗನವಾಡಿಗಳನ್ನು ಬಂದ್ ಮಾಡುವ ಮೂಲಕ ನೌಕರರು ಮುಷ್ಕರ ಹಮ್ಮಿಕೊಂಡಿದ್ದೇವೆ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ಕೂಡ ರದ್ದುಗೊಳಿಸಬೇಕು. ಐಸಿಡಿಎಸ್ ಯೋಜನೆಯಡಿ ಬಜೆಟ್‌ಅನ್ನು ಹೆಚ್ಚಿಸಬೇಕು. 26 ಸಾವಿರ ಕನಿಷ್ಠ ವೇತನ, 10 ಸಾವಿರ ಮಾಸಿಕ ಪಿಂಚಣಿ ಕೊಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಸುಜಾತ, ಪದಾಧಿಕಾರಿಗಳಾದ ಪಾರ್ವತಮ್ಮ, ಜಯಮಾಲಾ, ಶಾಹಿದಾ ಭಾನು, ಸುಮಿತ್ರಾ, ಸೂಜಿಯಾ ಹಾಜರಿದ್ದರು.