ಜಿಲ್ಲೆ

ಮೇ 2, 3ರಂದು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯನ್ನು ಮೇ 2 ಮತ್ತು 3ರಂದು ಆಯೋಜಿಸಲಾಗಿದೆ.
ಈಗಾಗಲೇ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತರಬೇತಿ ನೀಡಲಾಗಿದೆ. ಎರಡನೇ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಹಾಗೂ ಚುನಾವಣಾ ಕಾರ್ಯ ನಿರ್ವಹಿಸಲು ಆದೇಶದ ಪ್ರತಿಗಳನ್ನು ಜಾರಿ ಮಾಡಿರುವುದಲ್ಲದೆ ಎಸ್‌ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗಿದೆ.
ಮೇ 2ರಂದು ಹೆಗ್ಗಡದೇವನಕೋಟೆ, ನಂಜನಗೂಡು, ಕೃಷ್ಣರಾಜ-1, ಚಾಮರಾಜ-1 ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜನೆಗೊಂಡವರಿಗೆ. ಮೇ 3ರಂದು ಪಿರಿಯಾಪಟ್ಟಣ, ಕೃಷ್ಣರಾಜನಗರ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ-2, ಚಾಮರಾಜ-2, ನರಸಿಂಹರಾಜ, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಮತಗಟ್ಟೆ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಎರಡನೇ ತರಬೇತಿಗೆ ಹಾಜರಾಗುವುದು ಕಡ್ಡಾಯ. 2ನೇ ಹಂತದ ತರಬೇತಿಗೆ ಗೈರಾಗುವ ಯಾವುದೇ ಮತಗಟ್ಟೆ ಅಧಿಕಾರಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ 1951ರಡಿ ಎಫ್‌ಐಆರ್ ದಾಖಲಿಸಿ ಹಾಗೂ ಇಲಾಖಾ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.