ಜಿಲ್ಲೆ

ಮೇ 15 ರಂದು ಸೆಸ್ಕ್ ಮುಂಭಾಗ ಪ್ರತಿಭಟನೆ

ಚಾಮರಾಜನಗರ: ಜಿಲ್ಲೆಯ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೇ 15 ರಂದು ನಗರದ ಸೆಸ್ಕ್ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ವತಿಯಿಂದ ಸಂಘದ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹೇಳಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಇಂಧನ ಸಚಿವ ಕೆ.ಜೆ.ಜಾರ್ಜ್ ಶವಯಾತ್ರೆ ನಡೆಸಲಾಗುವುದು. ಶ್ರೀಭುವನೇಶ್ವರಿವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಸೆಸ್ಕ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು ರಾಜ್ಯ ಸರ್ಕಾರ 10 ಸಾವಿರ ಠೇವಣಿ ನಿಗಧಿಪಡಿಸಿರುವುದನ್ನು ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮಾಡಿರುವ ಯತ್ನವನ್ನು ನಿಲ್ಲಿಸಬೇಕು. ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ ಸಕ್ರಮ ಅಡಿಯಲ್ಲಿ, ಈ ಹಿಂದೆ ನೀಡುತ್ತಿದ್ದಂತೆ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು. ಜಮೀನಿನಲ್ಲಿ ವಾಸವಾಗಿರುವ ರೈತರಿಗೆ, ಹೈನುಗಾರಿಕೆ ಮಾಡುವವರಿಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ಹಿರಿಕಾಟಿ ಚಿಕ್ಕಣ್ಣ, ನಾಗರಾಜು ಹಾಜರಿದ್ದರು.