ಮೇ 10ರ ವರೆಗೆ ಮಾತ್ರ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್. ಮೇ 13ಕ್ಕೆ ಕಾಂಗ್ರೆಸ್ ಕೈಗೆ ಗಳಗಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜರಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆಸಿದ ರೋಡ್ ಶೋದಲ್ಲಿ ಮಾತನಾಡಿದರು.
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ನಕಲಿ ಕಾರ್ಡ್. ಇದು ಚುನಾವಣೆಗಾಗಿ ಆ ಪಕ್ಷದವರು ಮಾಡಿರುವ ಸ್ಟಂಟ್ ಅಷ್ಟೆ. ಜನರಿಗೆ ಮೋಸ ಮಾಡುವ ತಂತ್ರ ಇದು. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಈ ಸಲ ಸೋಲು ಖಚಿತ ಎಂದು ಟೀಕಿಸಿದರು.
ಇದೇ ಮೈಸೂರು ಜಿಲ್ಲೆಯವರು ಮುಖ್ಯಮಂತ್ರಿಯಾಗಿದ್ದರು. ಅವರು ಮೈಸೂರು ನಗರ ಅಭಿವೃದ್ಧಿ ಕುರಿತು ಏನು ಚಿಂತನೆಯನ್ನೇ ಮಾಡಲಿಲ್ಲ. ಅವರು ಮನಸ್ಸು ಮಾಡಿದ್ದರೆ ಏನು ಬೇಕಾದರೂ ಮಾಡಬಹುದಿತ್ತು. ಆದರೆ, ಏನು ಮಾಡಲಿಲ್ಲ. ಬರೀ ಘೋಷಣೆ ಮಾಡಿ ಹೋದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಳೆದ 5 ವರ್ಷದಲ್ಲಿ ಶಾಸಕ ಎಲ್.ನಾಗೇಂದ್ರ ಅವರು 900 ಕೋಟಿ ರೂ. ತಂದು ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಹಾರಾಣಿ ಕಾಲೇಜು, ಮಾರುಕಟ್ಟೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ಈ ಸಲ ಅವರಿಗೆ ಜನರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.