ಶಿವಮೊಗ್ಗ: ಜಾಗತಿಕವಾಗಿ ಅಗ್ರಪಂಕ್ತಿಯಲ್ಲಿರುವ ಮೈಸೂರು ಸಿಲ್ಕ್ ಉತ್ಪನ್ನಗಳು ನಾಡಿನ ಹೆಮ್ಮೆ ಹಾಗೂ ಶ್ರೇಷ್ಠ ಪರಂಪರೆಯ ಪ್ರತೀಕ ಎಂದು ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ 5 ದಿನಗಳ ಮೈಸೂರು ಸಿಲ್ಕ್ ಸೀರೆ ಹಾಗೂ ಸಿಲ್ಕ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ನಕಲು ಮಾಡಲಾಗದಂತಹ ಸೀರೆ ಉತ್ಪನ್ನಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೆರಡು ಬಾರಿ ಪ್ರದರ್ಶನ, ಮಾರಾಟ ಮಳಿಗೆ ತೆರೆಯಲಾಗುತ್ತಿದೆ ಎಂದರು.
ಇಲ್ಲಿನ ಉತ್ಪನ್ನಗಳನ್ನು ಶ್ರೀಸಾಮಾನ್ಯರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರೀದಿಸಬಹುದು. ಅಂತೆಯೇ ಸಂಸ್ಥೆಯು ಕಾಲಕಾಲಕ್ಕೆ ನವೀನ ವಿನ್ಯಾಸದ ಉತ್ಪನ್ನಗಳನ್ನು ಜನರ ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದರು.
ಕೆಎಸ್ಐಸಿ (ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾಪೋರೇಷನ್ ಲಿ.)ನ ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ಮಾರುಕಟ್ಟೆಯಲ್ಲಿ ದಿನೇದಿನೆ ರೇಷ್ಮೆ ಉತ್ಪನ್ನಗಳಿಗೆ ಜನರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಕ್ಕೆರಡು ಬಾರಿ ಮೇಳ ಆಯೋಜಿಸಲಾಗುತ್ತಿದೆ. 6 ಸಾವಿರ ರೂ.ನಿಂದ 1.50 ಲಕ್ಷ ರೂ.ವರೆಗಿನ ಹೊಸ ವಿನ್ಯಾಸದ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಹೇಳಿದರು.
ಶ್ರೇಷ್ಠ ಗುಣಮಟ್ಟಕ್ಕೆ ಹೆಸರು ವಾಸಿಯಾದ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರು ಹೆಮ್ಮೆಯಿಂದ ಖರೀದಿಸಿ ಹಿಂದಿರುಗುತ್ತಾರೆ ಎಂದ ಅವರು, ಸಂಸ್ಥೆಯು ಉತ್ಪಾದಿಸುವ ರೇಷ್ಮೆ ಬಟ್ಟೆಗಳಿಗೆ ಕಳೆದ ಕೆಲವು ವರ್ಷಗಳಿಂದ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಪಡೆಯುತ್ತ ಮುಂದುವರಿಯುತ್ತಿರುವುದು ಹರ್ಷದ ಸಂಗತಿ ಎಂದರು.
ಕೆಎಸ್ಐಸಿ ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ಕಳೆದ ವರ್ಷ ಪ್ರದರ್ಶನ ಮೇಳದಲ್ಲಿ 70 ಲಕ್ಷ ರೂ. ವಹಿವಾಟು ನಡೆಸಿದ್ದು 355 ರೇಷ್ಮೆ ಸೀರೆಗಳು ಮಾರಾಟವಾಗಿದ್ದವು. ಈಗಾಗಲೇ ಶಿವಮೊಗ್ಗದಲ್ಲಿ ಸಾಕಷ್ಟು ಬೇಡಿಕೆ ಬಂದಿದ್ದು ಈ ಬಾರಿಯೂ ಮೇಳ ಯಶಸ್ವಿಯಾಗುವ ವಿಶ್ವಾಸವಿದೆ. ಶುಕ್ರವಾರದಿಂದ ಫೆ.11ರ ರಾತ್ರಿ 8ರವರೆಗೆ ಪ್ರದರ್ಶನ ಇರಲಿದೆ ಎಂದು ಹೇಳಿದರು.