ಭಟ್ಕಳ; ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿನ ಪ್ರಾರ್ಥನೆಯಲ್ಲಿ ಭಾಗವಹಿಸಿದವರ ಪತ್ತೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದಂತೆ ಒಂದೊಂದೆ ಮಸೀದಿಯ ಪ್ರಕರಣಗಳು ಹೊರಬರಲಾರಂಭಿಸಿವೆ. ಮಾರ್ಚ್ ಆರಂಭದಿಂದ 20ರವೆರಗೆ ಮೈಸೂರಿನಲ್ಲಿ ಸಹ ನಡೆದ ಜಮಾತ್ನಲ್ಲಿ ಭಟ್ಕಳ 12 ಜನ ಯುವಕರು ಭಾಗವಹಿಸಿದ ಮಾಹಿತಿ ಲಭಿಸಿದ್ದು, ಅವರ ಪತ್ತೆಗೆ ಭಟ್ಕಳ ಡಿವೈಎಸ್ಪಿ ತಂಡ ಅವಿರತ ಪ್ರಯತ್ನ ನಡೆಸುತ್ತಿದೆ.
ಮೈಸೂರಿನ ಜಮಾತ್ನಲ್ಲಿ ಭಟ್ಕಳ, ಹೊನ್ನಾವರ ಸೇರಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಯುವಕರು ತೆರಳಿದ್ದರು.
ಜಮಾತ್ಗೆ ತೆರಳಿದವರು ತಾವಾಗಿಯೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಆದರೆ ಅದು ಪ್ರಯೋಜನವಾಗುತ್ತಿಲ್ಲ. ಆ ಯುವಕರನ್ನು ಪತ್ತೆ ಹಚ್ಚಿ ಅವರ ಟ್ರಾವೆಲ್ ಹಿಸ್ಟರಿ, ಭಟ್ಕಳದಲ್ಲಿ ಅವರ ಸಂಪರ್ಕಕ್ಕೆ ಬಂದವರ ಕುರಿತು ಮಾಹಿತಿ ಪಡೆಯಲು ತಾಲೂಕಾಡಳಿತ ಹೆಣಗಾಡುತ್ತಿದೆ.
ಮೈಸೂರಿನ ಜಮಾತ್ನಲ್ಲಿ ಎಲ್ಲೆಲ್ಲಿಂದ, ಯಾರ್ಯಾರು ಬಂದಿದ್ದರು, ವಿದೇಶದಿಂದ ಬಂದವರು ಯಾರು, ಎಷ್ಟು ದಿನ ಉಳಿದುಕೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರೋ ಇಲ್ಲವೋ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆಹಾಕಲು ಆರಂಭಿಸಿದೆ.
ಭಟ್ಕಳದಲ್ಲಿ ಲಾಕ್ಡೌನ್ ಪರಿಪಾಲನೆಯಾಗುತ್ತಿದೆ. ಯಾರೂ ಅದನ್ನು ಉಲ್ಲಂಘಿಸುವ ಸಾಹಸಕ್ಕೆ ಕೈ ಹಾಕಿಲ್ಲ. ಆದರೂ ಹೊರಗಡೆಯಿಂದ ಬಂದವರು, ರಾಜ್ಯದ ವಿವಿಧೆಡೆ ಜಮಾತ್ಗೆ ತೆರಳಿದವರ ಪತ್ತೆಗೆ ಇಲಾಖೆ ಮುಂದಾಗಿದೆ. ಅವರ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಗೌತಮ್ ಕೆ.ಸಿ., ಡಿವೈಎಸ್ಪಿ ಭಟ್ಕಳ
EndFragment
ದೆಹಲಿಯಿಂದ ಬಂದ ಐವರು ದಾಂಡೇಲಿಯಲ್ಲಿ
ಕಾರವಾರ : ದೆಹಲಿಯ ನಿಜಾಮುದ್ದೀನ್ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐವರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ದೆಹಲಿಗೆ ದಾಂಡೇಲಿಯಿಂದ ತೆರಳಿದ್ದ ಐವರು ಮಾ. 12ಕ್ಕೆ ಮರಳಿದ್ದಾರೆ. ಅವರಲ್ಲಿ ಮೂವರು ಸುರಕ್ಷಿತವಾಗಿದ್ದಾರೆ. ಮಂಗಳವಾರ ಎಲ್ಲರನ್ನೂ ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆ ತಂದು ಪರಿಶೀಲನೆ ನಡೆಸಲಾಗಿದೆ. ಮೂವರು ಸುರಕ್ಷಿತವಾಗಿದ್ದಾರೆ. ಇನ್ನಿಬ್ಬರಲ್ಲಿ ರೋಗದ ಲಕ್ಷಣವಿದ್ದು, ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಏ. 2ರಂದು ವರದಿ ಬರುವ ಸಾಧ್ಯತೆ ಇದೆ. ಅವರು ಸಂಪರ್ಕಕ್ಕೆ ಬಂದವರನ್ನು ಗುರುತಿಸುವ ಕಾರ್ಯವನ್ನು ಪೊಲೀಸ್ ಆರೋಗ್ಯ ಇಲಾಖೆ ನಡೆಸಿದೆ.
ಎಲ್ಲರೂ 14 ದಿನದ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಇದರಿಂದ ರೋಗ ಬರುವ ಸಾಧ್ಯತೆ ತೀರ ಕಡಿಮೆ ಇದೆ. ಆದರೂ ಪ್ರಯೋಗಾಲಯ ವರದಿಗಾಗಿ ಕಾಯಲಾಗುತ್ತಿದೆ. ಜನ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸ್ಪಷ್ಟಪಡಿಸಿದ್ದಾರೆ.