ಜಿಲ್ಲೆ

ಮೈಸೂರಿನ ದೇವಿಗೆ ಧಾರವಾಡದ ಬೆಳ್ಳಿ ಕವಚ

Dharwad

ವಿಕ್ರಮ ನಾಡಿಗೇರ ಧಾರವಾಡ

ಮೈಸೂರು ಅರಮನೆ ಆವರಣದ ದೇವಸ್ಥಾನದಲ್ಲಿನ ಮೂರ್ತಿಗೆ ಧಾರವಾಡದ ಕಲಾವಿದರು ಅತ್ಯಂತ ಸುಂದರ ಬೆಳ್ಳಿ ಕವಚ ನಿರ್ವಿುಸುವ ಮೂಲಕ ಈ ಬಾರಿಯ ದಸರಾ ಸಂಭ್ರಮದಲ್ಲಿ ಧಾರವಾಡದ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ.

ಅರಮನೆ ಆವರಣದಲ್ಲಿನ ಭುವನೇಶ್ವರಿ ದೇವಸ್ಥಾನ ಸುಮಾರು 70 ವರ್ಷಗಳ ಹಳೆಯದು. ಶ್ರೀಕಂಠದತ್ತ ಒಡೆಯರ ತಂದೆ ಈ ದೇವಸ್ಥಾನ ನಿರ್ವಿುಸಿದ್ದಾರೆ. ಈ ದೇವಿ ಮೂರ್ತಿಗೆ ಬೆಳ್ಳಿ ಕವಚ ಇರಲಿಲ್ಲ. ಇದೀಗ ಮೈಸೂರು ಸೇರಿ ರಾಜ್ಯದಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಭಕ್ತರು ಸೇರಿ ಬೆಳ್ಳಿ ಕವಚ ಮಾಡಿಸಿದ್ದಾರೆ. ಸಂಸ್ಥೆ ಭಕ್ತರೊಬ್ಬರಿಗೆ ಧಾರವಾಡದ ನವೀನ ಕಡ್ಲಾಸ್ಕರ್ ಪರಿಚಯವಿತ್ತು. ಅವರು ಅದ್ಭುತ ಕಲಾವಿದರು ಎಂದು ತಿಳಿದಿತ್ತು. ಹೀಗಾಗಿ ನವೀನ ಅವರಿಗೆ ಈ ಜವಾಬ್ದಾರಿ ವಹಿಸಲಾಗಿತ್ತು. ನವೀನ ಅವರು ಇತರ ನಾಲ್ಕು ಜನರೊಂದಿಗೆ ಸೇರಿ ನಿರ್ವಿುಸಿರುವ ಸುಂದರ ಕವಚದೊಂದಿಗೆ ಮಂಗಳವಾರ ಮೈಸೂರು ತಲುಪಿದ್ದಾರೆ.

ಕರೊನಾ ಹಾವಳಿ ಪ್ರಾರಂಭಕ್ಕೂ ಪೂರ್ವದಲ್ಲಿ ಕವಚ ಸಿದ್ಧಪಡಿಸುವಂತೆ ನವೀನ ಅವರಿಗೆ ತಿಳಿಸಿ, ಮೇ 13ರ (ಶ್ರೀ ಶ್ರೀ ರವಿಶಂಕರ ಗುರೂಜಿ ಜನ್ಮದಿನ) ಹೊತ್ತಿಗೆ ನೀಡುವಂತೆ ತಿಳಿಸಲಾಗಿತ್ತು. ಆದರೆ ಕರೊನಾ ಹಾವಳಿಯಿಂದ ಲಾಕ್​ಡೌನ್ ಘೊಷಣೆಯಾಗಿ ಕವಚ ಸಿದ್ಧವಾಗುವಲ್ಲಿ ವಿಳಂಬವಾಗಿದೆ. ಆದರೆ, ಇದು ಒಂದು ರೀತಿಯಲ್ಲಿ ಉತ್ತಮವೇ. ದಸರಾ ಸಂದರ್ಭದಲ್ಲಿ ದೇವಿಗೆ ಕವಚ ನೀಡುತ್ತಿರುವುದರಿಂದ ಧಾರವಾಡವೂ ಪ್ರಸಿದ್ಧವಾಗಲಿದೆ ಎಂಬುದು ಸಂತಸದ ಸಂಗತಿ.

ಅಂದಾಜು 12 ಕೆಜಿ ಬೆಳ್ಳಿ ಬಳಸಿ 6 ತಿಂಗಳಲ್ಲಿ ಕವಚ ತಯಾರಿಸಲಾಗಿದೆ. ನವೀನ ಅವರ ಜತೆಗೆ ಸಚಿನ್ ಕಡ್ಲಾಸ್ಕರ್, ನಿಖಿಲ್ ಸೂಳಿಭಾವಿ ಹಾಗೂ ಗಣೇಶ ಸಾವಗಾವ್ ಎಂಬುವವರು ದುಡಿದಿದ್ದಾರೆ. ಈ ತಂಡವು ಕವಚದೊಂದಿಗೆ ಈಗಾಗಲೇ ಮೈಸೂರಿಗೆ ತಲುಪಿದ್ದು, ಅಂತಿಮ ಸ್ಪರ್ಶ ನೀಡಿ ಅಳವಡಿಕೆಗೆ ಅನುಕೂಲ ಮಾಡಿಕೊಡಲಿದೆ.

ಲಾಕ್​ಡೌನ್ ಅವಧಿಗೂ ಪೂರ್ವ ಕವಚ ಸಿದ್ಧಪಡಿಸಲು ಹೇಳಿ ಮೇ 13ರಂದು ನೀಡುವಂತೆ ತಿಳಿಸಿದ್ದರು. ಆದರೆ ಕರೊನಾ ಹಾವಳಿಯಿಂದ ವಿಳಂಬವಾಗಿದೆ. ಇದೀಗ ದಸರಾ ಸಂಭ್ರಮದ ನಡುವೆ ದೇವಿಗೆ ಕವಚ ನೀಡುತ್ತಿರುವುದು ಖುಷಿಯಾಗಿದೆ. ನಮ್ಮ ತಂಡದೊಂದಿಗೆ ನಿರಂತರ 6 ತಿಂಗಳಲ್ಲಿ ಈ ಕವಚ ತಯಾರಿಸಿದ್ದೇವೆ. | ನವೀನ ಕಡ್ಲಾಸ್ಕರ್ ಕಲಾಕಾರ
ಅರಮನೆ ಆವರಣದಲ್ಲಿನ ಭುವನೇಶ್ವರಿ ದೇವಸ್ಥಾನದ ಮೂರ್ತಿಗೆ ಬೆಳ್ಳಿ ಕವಚ ಇರಲಿಲ್ಲ. ನಮ್ಮ ಸ್ವಾಮೀಜಿ ಒಬ್ಬರು ದೇವಸ್ಥಾನಕ್ಕೆ ತೆರಳಿದ್ದಾಗ ಕವಚ ಇರದದ್ದನ್ನು ಗಮನಿಸಿದ್ದರು. ಹೀಗಾಗಿ ಆರ್ಟ್ ಆಫ್ ಲಿವಿಂಗ್ ಭಕ್ತಾದಿಗಳು ಸೇರಿ ಕವಚ ಮಾಡಿಸಿದ್ದೇವೆ. | ಚನ್ನಕೇಶವ ಆರ್ಟ್ ಆಫ್ ಲಿವಿಂಗ್ ಭಕ್ತ, ಮೈಸೂರು