ಜಿಲ್ಲೆ

ಮೈಲುತುತ್ತಕ್ಕೆ ಬಿಡಿಗಾಸು ಅನುದಾನ

ಶಿರಸಿ: ಸಮಗ್ರ ತೋಟಗಾರಿಕೆ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಸಬ್ಸಿಡಿ ನೀಡುವುದಕ್ಕೆ ಬಿಡಿಗಾಸು ಅನುದಾನ ಮಾತ್ರ ಲಭ್ಯವಿದೆ. ಇದರಿಂದ ಅರ್ಜಿ ಸಲ್ಲಿಸಿದ ನೂರಾರು ಅಡಕೆ ಬೆಳೆಗಾರರು ಸಬ್ಸಿಡಿಯಿಂದ ವಂಚಿತರಾಗಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಈ ಯೋಜನೆಯಡಿ 17.25 ಲಕ್ಷ ರೂಪಾಯಿ ಲಭ್ಯತೆಯಿದೆ. ಆದರೆ, 469 ರೈತರು ಅರ್ಜಿ ಸಲ್ಲಿಸಿದ್ದು, ಈ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಮೊದಲು ಅರ್ಜಿ ನೀಡಿದ ಒಂದಷ್ಟು ರೈತರಿಗೆ ಮಾತ್ರ ಸೌಲಭ್ಯ ದೊರೆಯುತ್ತದೆ. ಅಡಕೆ ಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೆ ದ್ರಾವಣಕ್ಕೆ ಅಗತ್ಯವಾದ ಮೈಲುತುತ್ತಕ್ಕೆ ತೋಟಗಾರಿಕೆ ಇಲಾಖೆಯಿಂದ ಹಿಂದಿನಿಂದಲೂ ಸಬ್ಸಿಡಿ ನೀಡುವ ಯೋಜನೆಯಿದೆ. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಯೋಜನೆಗೆ ಅನುದಾನ ತೀರಾ ಕಡಿಮೆ ಬರುತ್ತಿದ್ದು, ಅರ್ಜಿ ಸಲ್ಲಿಸಿದ ಹಲವು ರೈತರಿಗೆ ಸಬ್ಸಿಡಿ ಮರೀಚಿಕೆಯಾಗುತ್ತಿದೆ.

ನಿದು ಯೋಜನೆ...?: ಮೈಲುತುತ್ತಕ್ಕೆ ಶೇ. 75ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಒಬ್ಬ ರೈತರಿಗೆ 1 ಹೆಕ್ಟೇರ್​ವರೆಗೆ 10 ಕೆಜಿ ಮೈಲುತುತ್ತಕ್ಕೆ ಸಬ್ಸಿಡಿ ನೀಡುವುದು ಈ ಯೋಜನೆಯಾಗಿದೆ. ಕೆಜಿಗೆ 320 ರೂ. ದರದ ಮೈಲುತುತ್ತಕ್ಕೆ ಈ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಯೋಜನೆಯಡಿ ಸಬ್ಸಿಡಿ ನೀಡುವುದಕ್ಕೆ ಕನಿಷ್ಟ 60ರಿಂದ 70 ಲಕ್ಷ ರೂ. ಬೇಕಾಗುತ್ತದೆ. ಹಿಂದೆಲ್ಲ ಶಿರಸಿ ತಾಲೂಕಿಗೆ 30 ಲಕ್ಷ ರೂ.ಅನುದಾನ ಸಿಗುತ್ತಿತ್ತು. ಆದರೆ, ಈಗ ಎರಡ್ಮೂರು ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಅಲ್ಪಸ್ವಲ್ಪ ಅನುದಾನ ಲಭ್ಯ ಆಗುತ್ತಿರುವುದರಿಂದ ಅರ್ಜಿ ಸಲ್ಲಿಸಿದ ಅದೆಷ್ಟೋ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಕೇವಲ ಅರ್ಜಿ ಸಲ್ಲಿಕೆಗೆ ಮಾತ್ರ ಈ ಯೋಜನೆ ಸೀಮಿತವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 469 ಮಂದಿ ಅರ್ಜಿ ಸಲ್ಲಿಸಿದ್ದು, ತೋಟಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿ ಆಯಾ ತಾಲೂಕುಗಳಿಗೆ 35 ಸಾವಿರದಿಂದ 3 ಲಕ್ಷ ರೂ.ವರೆಗೆ ಅನುದಾನ ನೀಡುವ ಗುರಿ ನಿಗದಿಪಡಿಸಲಾಗಿದೆ. ಅನುದಾನ ಕಡಿಮೆ ಇರುವುದರಿಂದ ಮೊದಲು ಅರ್ಜಿ ಸಲ್ಲಿಸಿದವರಿಗೆ ಸಬ್ಸಿಡಿ ನೀಡಲಾಗುತ್ತಿದೆ.

ಸಮಗ್ರ ತೋಟಗಾರಿಕೆ ಬೆಳೆಗಳ ಕೀಟ ಹಾಗೂ ರೋಗಗಳ ನಿಯಂತ್ರಣ ಯೋಜನೆಯಡಿ ಮೈಲುತುತ್ತ ಸಬ್ಸಿಡಿ ಜಿಲ್ಲೆಗೆ 17.25 ಲಕ್ಷ ರೂಪಾಯಿ ಅನುದಾನ ಲಭ್ಯವಿದೆ. ಅದರಲ್ಲಿ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ನೀಡಲಾಗುತ್ತದೆ. | ಬಿ.ಪಿ. ಸತೀಶ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ