ಜಿಲ್ಲೆ

ಮೇಘದೂತ ಆಪ್್ಯ ಕನ್ನಡದಲ್ಲಿ

ಹಾವೇರಿ: ಹವಾಮಾನ ಮುನ್ಸೂಚನೆ, ಹವಾಮಾನ ಆಧಾರಿತ ಬೆಳೆಗಳು, ವಿವಿಧ ಕೀಟ, ರೋಗಗಳಿಂದ ಬೆಳೆಗಳ ರಕ್ಷಣೆ ಮುಂತಾದ ಕೃಷಿ ಸಂಬಂಧಿತ ಸಲಹೆಗಳನ್ನು ರೈತರಿಗೆ ಒದಗಿಸುವ ಉದ್ದೇಶದಿಂದ ಹವಾಮಾನ ಇಲಾಖೆ ಆರಂಭಿಸಿರುವ ಮೇಘದೂತ ಆಪ್ ಈಗ ಪ್ರಾದೇಶಿಕ ಭಾಷೆಯಲ್ಲಿಯೂ ಪ್ರಕಟವಾಗಿದೆ.

ಭಾರತೀಯ ಹವಾಮಾನ ಇಲಾಖೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಜಂಟಿಯಾಗಿ ರೈತರಿಗೆ ಅಗತ್ಯ ಮಾಹಿತಿಗಾಗಿ ಮೇಘದೂತ ಆಪ್ ರೂಪಿಸಿವೆ. ಮೇಘದೂತ ಆಪ್ ರೈತರಿಗೆ ಹಾಗೂ ಆಸಕ್ತ ಬಳಕೆದಾರರಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಒದಗಿಸುತ್ತದೆ. ಈ ಮೇಘದೂತ ಆಪ್ ಮಾಹಿತಿ ಕೃಷಿ ಮತ್ತು ತೋಟಗಾರಿಕೆಗೆ ಸೀಮಿತವಾಗದೇ ಹೈನುಗಾರಿಕೆಯ ಮಾಹಿತಿಯನ್ನೂ ಒಳಗೊಂಡಿದೆ. ಋತುವಿಗನುಸಾರವಾಗಿ ಕುರಿ, ಕೋಳಿ ಮತ್ತು ಇತರ ಜಾನುವಾರುಗಳಿಗೆ ತಗಲುವ ಕಾಯಿಲೆ, ಅವುಗಳ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ಒದಗಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಜಿಲ್ಲೆಯ ರೈತರು ಪಡೆದುಕೊಳ್ಳಬೇಕು ಎಂದು ಕೆವಿಕೆಯ ಮುಖ್ಯಸ್ಥ ಡಾ. ಅಶೋಕ ಪಿ. ತಿಳಿಸಿದ್ದಾರೆ.

ಆಪ್​ನಲ್ಲಿ ಹಿಂದಿನ ದಿನಗಳ ಆಯಾ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ ತಿಳಿಯಬಹುದು. ಹವಾಮಾನ ಮುನ್ಸೂಚನೆ ಆಧರಿಸಿ ಜಿಲ್ಲಾವಾರು ಪ್ರಮುಖ ಬೆಳೆಗಳಿಗೆ ನಾನಾ ಹಂತಗಳಲ್ಲಿ ಪ್ರಚಲಿತ ಹವಾಮಾನ ಅಂಶಗಳಿಂದ ಬೆಳೆಗಳ ಮೇಲಾಗುವ ಪರಿಣಾಮಗಳನ್ನು ಅರಿತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ರೈತರು ತುರ್ತಾಗಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆ ಚುಟುಕು ಸಂದೇಶಗಳನ್ನು ಈ ಆಪ್​ನಲ್ಲಿ ನೋಡಬಹುದು.

10 ಭಾಷೆಗಳಲ್ಲಿ ಮಾಹಿತಿ: ಕನ್ನಡ, ತೆಲುಗು, ಮರಾಠಿ, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಸೇರಿ ಒಟ್ಟು 10 ಭಾಷೆಗಳಲ್ಲಿ ಜಿಲ್ಲಾವಾರು ಮಾಹಿತಿ ಒದಗಿಸುತ್ತದೆ. ಮೇಘದೂತ ಆಪ್ ಮೂಲಕ ಮುಂದಿನ 5 ದಿನಗಳ ಹವಾಮಾನ ಆಧಾರಿತ ಅಂಶಗಳಾದ ಮಳೆ, ಉಷ್ಣಾಂಶ, ಆರ್ದ್ರತೆ, ಗಾಳಿಯ ವೇಗ ಮತ್ತು ಗಾಳಿಯ ದಿಕ್ಕಿನ ಮುನ್ಸೂಚನೆ ನೀಡುತ್ತದೆ. ಇವು ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ನಿರ್ವಹಣೆಗೆ ಸಾಕಷ್ಟು ಅನುಕೂಲಕರ ಆಗಿವೆ ಎಂದು ಡಾ. ಅಶೋಕ ತಿಳಿಸುತ್ತಾರೆ.

ಡೌನ್​ಲೋಡ್ ಹೀಗೆ: ಸ್ಮಾರ್ಟ್ ಫೋನ್ ಉಪಯೋಗಿಸುವ ಎಲ್ಲ ರೈತರು ಪ್ಲೇ ಸ್ಟೋರ್​ನಲ್ಲಿ ಮೇಘದೂತ (MEGHDOOT) ಎಂದು ಟೈಪ್ ಮಾಡಿ ಆಪ್ ಡೌನ್​ಲೋಡ್ ಮಾಡಿಕೊಳ್ಳಬಹುದು. ರೈತರು ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನಮೂದು ಮಾಡಬೇಕು. ನಂತರ ನೋಂದಾಯಿತ ಬಳಕೆದಾರರಿಗೆ ಆಯಾ ಜಿಲ್ಲೆಯ ನಿರ್ದಿಷ್ಟ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳ ಮಾಹಿತಿ ಲಭಿಸುತ್ತದೆ.

ಹವಾಮಾನಕ್ಕೆ ತಕ್ಕಂತೆ ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಕಾಲಕ್ಕೆ ಅನುಗುಣವಾಗಿ ಬೆಳೆಗಳನ್ನು ಬಿತ್ತನೆ ಮಾಡಿ ಹೆಚ್ಚು ಇಳುವರಿ ಪಡೆಯಲು ಮೇಘದೂತ ಆಪ್ ರೈತರಿಗೆ ಸಹಕಾರಿಯಾಗಲಿದೆ. ಈ ಆಪ್​ನ್ನು ಪ್ರತಿಯೊಬ್ಬ ರೈತರು ಹೊಂದುವ ಮೂಲಕ ಜಿಲ್ಲೆಯ ಹವಾಮಾನ ಮುನ್ಸೂಚನೆ ಹಾಗೂ ಕೃಷಿ ಆಧಾರಿತ ಮಾಹಿತಿಯನ್ನು ಪಡೆಯಬಹುದು. ಜಿಲ್ಲೆಯ ರೈತರು ಹೆಚ್ಚಾಗಿ ಇದರ ಪ್ರಯೋಜನ ಪಡೆಯಲು ಮಾಹಿತಿ ನೀಡುತ್ತಿದ್ದೇವೆ. | ಡಾ. ಅಶೋಕ ಪಿ. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ