ಜಿಲ್ಲೆ

ಮೇ 25ರವರೆಗೆ ಕಡಲೆಕಾಳು ಖರೀದಿ

ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಹಾಗೂ ನೋಂದಣಿ ಅವಧಿಯನ್ನು ಮೇ 25ರ ವರೆಗೆ ವಿಸ್ತರಣೆ ಮಾಡಿರುವ ಸರ್ಕಾರ, ಬೆಳೆಗಾರರಿಗೆ ನೋಂದಣಿ ಹಾಗೂ ಮಾರಾಟಕ್ಕೆ ಮತ್ತಷ್ಟು ಅವಕಾಶ ನೀಡಿದೆ.

ಈ ಮೊದಲು ಏಪ್ರಿಲ್ 30ರ ವರೆಗೆ ಹೆಸರು ನೋಂದಣಿ ಹಾಗೂ ಮೇ 12ರ ವರೆಗೆ ಕಡಲೆಕಾಳು ಖರೀದಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿತ್ತು.

ಕರೊನಾ ಸೋಂಕು ಹರಡುವಿಕೆ ತಡೆಯಲು ಲಾಕ್​ಡೌನ್, ನಿಷೇಧಾಜ್ಞೆ ಇತ್ಯಾದಿ ಹಿನ್ನೆಲೆಯಲ್ಲಿ ಅನ್ನದಾತರ ಮನವಿಗೆ ಸ್ಪಂದಿಸಿದ ಸರ್ಕಾರ ಇದೀಗ ಖರೀದಿ ಹಾಗೂ ನೋಂದಣಿ ಅವಧಿ ವಿಸ್ತರಣೆ ಮಾಡಿದೆ.

ಮೇ 12ರ ವರೆಗೆ ರೈತರು ಹೆಸರು ನೋಂದಣಿ ಮಾಡಿ, ಮೇ 25ರ ವರೆಗೆ ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಮಾಡಬಹುದಾಗಿದೆ. ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆ 4875 ರೂ.ನಂತೆ ಸರ್ಕಾರ ಖರೀದಿಸುತ್ತದೆ. ಸದ್ಯ ಮುಕ್ತ ಮಾರುಕಟ್ಟೆ ಕಡಲೆ ಬೆಲೆ ಗರಿಷ್ಠ 3500ರೂ.ವರೆಗೆ ಇದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಎಪಿಎಂಸಿ ಸೇರಿ 13 ಕೇಂದ್ರಗಳಲ್ಲಿ ಕಡಲೆ ಖರೀದಿಸಲಾಗುತ್ತಿದೆ. ಏ. 26ರ ವರೆಗೆ ಧಾರವಾಡ ಜಿಲ್ಲೆಯಲ್ಲಿ 19484 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಲಾಕ್​ಡೌನ್​ಗಿಂತ ಮೊದಲು ಅಂದರೆ ಮಾರ್ಚ್ 24ರ ವರೆಗೆ 17ಸಾವಿರ ರೈತರು ನೋಂದಣಿ ಮಾಡಿದ್ದರು. ಲಾಕ್​ಡೌನ್ ಮಧ್ಯೆ ರೈತರು ಫಸಲು ಮಾರಾಟಕ್ಕೆ ಸರ್ಕಾರ ಒಂದಿಷ್ಟು ಅನುವು ಮಾಡಿಕೊಟ್ಟಿದ್ದರಿಂದ ಇದೀಗ ಮತ್ತೆ 2 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ವರೆಗೆ ಒಟ್ಟು 13 ಕೇಂದ್ರಗಳಲ್ಲಿ 103046 ಕ್ವಿಂಟಾಲ್ ಕಡಲೆಕಾಳು ಖರೀದಿ ಮಾಡಲಾಗಿದೆ. ನೋಂದಣಿ ಮಾಡಿಕೊಂಡ ರೈತರ ಪೈಕಿ 12 ಸಾವಿರ ರೈತರು ಖರೀದಿ ಕೇಂದ್ರಗಳಿಗೆ ಆಗಮಿಸಿ ಕಡಲೆ ಖರೀದಿ ಕೊಟ್ಟಿದ್ದಾರೆ. ಇನ್ನೂ ಏಳು ಸಾವಿರ ರೈತರಿಂದ ಕಡಲೆ ಖರೀದಿ ಮಾಡಬೇಕಿದೆ ಎಂದು ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಸಚಿನ್ ಪಾಟೀಲ್ ತಿಳಿಸಿದ್ದಾರೆ.