ದಾವಣಗೆರೆ: ಬೆಣ್ಣೆ ನಗರಿಯ ದೃಶ್ಯ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ರಜಾ ದಿನವಾದ ಭಾನುವಾರವೂ ವಿಶೇಷವಾದ ಕಲಾ ವಾತಾವರಣ ಸೃಷ್ಟಿಯಾಯಿತು.
ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವದ ಭಾಗವಾದ ಚಿತ್ರಕಲಾ ಸ್ಪರ್ಧೆ ಇದಕ್ಕೆ ಸಾಕ್ಷಿಯಾಯಿತು.
ಜಿಲ್ಲಾಡಳಿತದಿಂದಲೇ ಕೊಡಲಾಗಿದ್ದ ಕ್ಯಾನವಾಸ್, ಬಣ್ಣಗಳ ಮೂಲಕ ಸ್ಪರ್ಧೆಗೆ ನೀಡಿದ್ದ ಜಲಸಂರಕ್ಷಣೆ ವಿಷಯ ಕುರಿತು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಚಿತ್ರಕಲಾ ಸ್ಪರ್ಧಾಳುಗಳು ಅವರವರ ಮನಸ್ಸಿನ ಚಿಂತನಾನುಸಾರ ಚಿತ್ರಾಭಿವ್ಯಕ್ತ ಪಡಿಸಿದರು.
ಬೆಳಗಾವಿಯ ಅರುಣ್ ಗಾಣಗಿ, ಬೆಂಗಳೂರಿನ ಆರ್.ತನುಜಾ, ಬೆಂಗಳೂರು ಗ್ರಾಮಾಂತರದ ಪ್ರಸನ್ನಕುಮಾರ್, ತುಮಕೂರಿನ ಡ್ಯಾನಿಯಲ್, ಕಲಬುರ್ಗಿಯ ಸಂಜನಾ, ಶಿವಮೊಗ್ಗದ ಡಿ.ಆಕಾಶ, ಬೀದರ್‌ನ ಆಲಿಯಾ ಸುಲ್ತಾನ್, ಚಿತ್ರದುರ್ಗದ ಗಗನರಾಜ್, ಉತ್ತರ ಕನ್ನಡದ ಪ್ರಶಾಂತ ಬೀರಗೌಡ, ವಿಜಯಪುರದ ಅಶ್ವಿನಿ ವಿಜಯಪುರ, ಗದಗದ ವಿನುತಾ ಅಕ್ಕಸಾಲಿಗ, ಬಾಗಲಕೋಟೆಯ ಅಶೋಕ ಕಡಕೋಳ, ಬಳ್ಳಾರಿಯ ಐಶ್ವರ್ಯಾ, ಮಂಡ್ಯದ ಎ.ವೇದಾಂತ, ಧಾರವಾಡದ ಶಿವರಾಜ್, ದಾವಣಗೆರೆಯ ಕಾರ್ತಿಕ್ ಆಲೂರ, ಚಿಕ್ಕಮಗಳೂರಿನ ಅಶ್ವತ್ಥ, ಚಿಕ್ಕಬಳ್ಳಾಪುರದ ಎನ್.ಪ್ರಿಯಾಂಕಾ, ಮೈಸೂರಿನ ಜಯಾನಂದ, ರಾಯಚೂರಿನ ಪೂಜಾರಾಣಿ, ಚಾಮರಾಜನಗರದ ಮಾದಪ್ಪ, ವಿಜಯನಗರದ ಜಿಯಾ ಅಹಮದ್ ಖಾದ್ರಿ, ಹಾವೇರಿಯ ದರ್ಶನ್ ಬೆಟಗೇರಿ ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.
ದಾವಣಗೆರೆಯ ದೃಶ್ಯ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಎಂ. ಚಿಕ್ಕಪಾಟೀಲ್, ನಿವೃತ್ತ ಪ್ರಾಚಾರ್ಯ ಡಾ .ರವೀಂದ್ರ ಕಮ್ಮಾರ, ಧಾರವಾಡದ ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್‌ನ ನಿವೃತ್ತ ಪ್ರಾಚಾರ್ಯರಾದ ರೇಣುಕಾ ಮಾರ್ಕಾಂಡೆ, ಕಲಬುರ್ಗಿಯ ಎಚ್.ಬಾಬುರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಮಹೇಶ್ ದೊಡ್ಮನಿ, ಮಹಾವಿದ್ಯಾಲಯದ ಬೋಧನಾ ಸಹಾಯಕ ಕೆ.ವಿ.ಪ್ರಮೋದ್ ಆಚಾರ್, ಕಾರ್ಯಕ್ರಮ ಸಹಾಯಕಿ ಪೂರ್ಣಿಮಾ, ಡಾ.ಜಯಪ್ಪ, ಉಪನ್ಯಾಸಕಿ ಓಂಕಾರಮ್ಮ ಇನ್ನಿತರರು ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು.
ಚಿತ್ರ ಬಿಡಿಸುವ ಮೂಲಕ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಚಾಲನೆ ನೀಡಿ, ಸಾಂಕೇತಿಕವಾಗಿ ಸ್ಪರ್ಧಾಳುಗಳಿಗೆ ಕಿಟ್ ವಿತರಿಸಿದರು. ಹರಿಹರದ ಶಾಸಕ ಬಿ.ಪಿ.ಹರೀಶ್ ಇತರರಿದ್ದರು.