ಚಿತ್ರದುರ್ಗ: ಮೆದೇಹಳ್ಳಿಯ ಮೂಲ ಸೌಕರ್ಯಕ್ಕೆ ತಮ್ಮ ಅನುದಾನದಲ್ಲಿ ಒಂದು ಕೋಟಿ ರೂ. ಒದಗಿಸಲಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ನಗರಕ್ಕೆ ಹೊಂದಿಕೊಂಡ ಮೆದೇಹಳ್ಳಿ ಗ್ರಾಮದ ಗ್ರಂಥಾಲಯ ಬಳಿ ಬುಧವಾರ ಏರ್ಪಡಿಸಿದ್ದ ಮನೆ ಬಾಗಿಲಿಗೆ ಇ-ಸ್ವತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂಲ ಸೌಕರ್ಯ ಹಾಗೂ ಸ್ವಚ್ಛತೆಗೆ ಎಲ್ಲ ಗ್ರಾಪಂಗಳು ಹೆಚ್ಚಿನ ಆದ್ಯತೆ ಕೊಡಬೇಕು. ಮನೆ ಬಾಗಿಲಿಗೆ ಇ-ಸ್ವತ್ತು ವಿತರಣೆ ಕಾರ್ಯಕ್ಕೆ ತಮ್ಮ ಕ್ಷೇತ್ರದ ಇತರೆ ಗ್ರಾಪಂಗಳಲ್ಲೂ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಶಾಸಕರು ಗ್ರಾಪಂ ಕಟ್ಟಡದ ಮುಂದುವರಿದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಬಡಾವಣೆಗಳಿಗೆ ಶಾಂತಿ ಸಾಗರ ನೀರು ಪೂರೈಕೆಗೆ ಚಾಲನೆ ನೀಡಿದರು. ಗ್ರಾಮದ ನವೀಕೃತ ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ಕಾವ್ಯ ವಿಜಯಕುಮಾರ್, ಉಪಾಧ್ಯಕ್ಷೆ ಲೀಲಾವತಿ ಶಿವಮೂರ್ತಿ, ನಿಂಗಪ್ಪ, ದುಗ್ಗಪ್ಪ, ನಿರಂಜನಮೂರ್ತಿ, ಲಕ್ಷ್ಮೀದೇವಿ, ಭಾಗ್ಯಮ್ಮ, ಗೌರಮ್ಮ, ಕಮಲಮ್ಮ, ಮಮತಾ ಇನ್ನಿತರ ಗ್ರಾಪಂ ಸದಸ್ಯರು, ಮಾಜಿ ಅಧ್ಯಕ್ಷ ವಿಜಯಕುಮಾರ್, ಪಿಡಿಒ ಆರ್.ಪಾತಣ್ಣ, ಜಿಪಂ ಮಾಜಿ ಸದಸ್ಯ ಆರ್. ನರಸಿಂಹರಾಜು, ನಗರಸಭೆ ಸದಸ್ಯ ವೆಂಕಟೇಶ್, ತಾಪಂ ಇಒ ರವಿಕುಮಾರ್, ಕೆಡಿಪಿ ಸದಸ್ಯ ನಾಗರಾಜ್ ಮತ್ತಿತರರು ಇದ್ದರು.