ಬಾಗಲಕೋಟೆ: ನಿಯಮಿತ ವ್ಯಾಯಾಮ, ನಿದ್ರೆ, ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆ ಮಾಡುವ ಮೂಲಕ ಮೆದುಳಿನ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕೆಂದು ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯ ಡಾ.ವಿಕಾಸ ಪರ್ವತಿಕರ್ ಹೇಳಿದರು.
ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಆಸ್ಪತ್ರೆ ಬ್ರೆನ್ ಹೆಲ್ತ್ ಕ್ಲಿನಿಕ್ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಮಾನಸಿಕವಾಗಿ ಸಕ್ರಿಯವಾಗಿ ಇರಬೇಕಾದಲ್ಲಿ ಮೆದುಳಿನ ಆರೋಗ್ಯ ಮುಖ್ಯವಾಗಿದೆ. ಮೆದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.
ಮೆದುಳು ಆರೋಗ್ಯ ಮತ್ತು ಆರೈಕೆಯನ್ನು ಜಾಗತಿಕ ಅಭಿಯಾನವಾಗಿ ನಡೆಸಲಾಗುತ್ತಿದೆ. ಮೆದುಳು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳು ಮತ್ತು ಹಿಂಜರಿಕೆಯಿಂದ ಹೊರ ಬರಬೇಕು. ಮೆದುಳು ಆರೋಗ್ಯವು ಮೂಲಭೂತ ಹಕ್ಕಾಗಿದ್ದು, ಸಮಸ್ಯೆಯನ್ನು ಮುಚ್ಚಿಡದೇ ವೈದ್ಯರ ಬಳಿ ಹಂಚಿಕೊಳ್ಳಬೇಕು. ಬಹುತೇಕ ನರರೋಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಪರಿಣಾಮಕಾರಿ ಚಿಕಿತ್ಸೆ ಮತ್ತು ನಿರ್ವಹಣೆಯಿಂದ ರೋಗ ಉಲ್ಬಣ ತಡೆಗಟ್ಟಬಹುದಾಗಿದೆ ಎಂದರು.
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಅಂಗ ರಚನಾ ಶಾಸ್ತç ವಿಭಾಗದ ಪ್ರೊ. ಡಾ.ಮಂಜುಳಾ ಶೀಲವಂತರ ತಮ್ಮ ತಂಡದೊಂದಿಗೆ ಮೆದುಳಿನ ಅಂಗರಚಣೆಯ ಕಾರ್ಯನಿರ್ವಹಣೆ ಬಗ್ಗೆ ಜನ ಸಾಮಾನ್ಯರಿಗೆ ಮೆದುಳಿನ ಮಾದರಿ ತೋರುಸುವ ಮೂಲಕ ವಿವರಣೆ ನೀಡಿದರು. ಪ್ರಾರಂಭದಲ್ಲಿ ಜಿಲ್ಲಾ ಆಸ್ಪತ್ರೆಯ ಡಾ.ಯರಗಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಕರಿಯನ್ನವರ, ಕಾರ್ಯಕ್ರಮ ಜಿಲ್ಲಾ ಸಂಯೋಜಕ ಬಸವರಾಜ ಹೂಗಾರ ಸೇರಿದಂತೆ ಕರ್ನಾಟಕ ಮೆದುಳು ಆರೋಗ್ಯದ ಉಪಕ್ರಮದ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.