ಬ್ಯಾಡಗಿ: ಕರೊನಾ ವೈರಸ್ ಮೆಣಸಿನಕಾಯಿ ಮಾರುಕಟ್ಟೆ ವ್ಯವಹಾರದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 2,16,808 ಚೀಲಗಳು ಆವಕಗೊಂಡು, ಒಂದೇ ದಿನದಲ್ಲಿ ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ.
ಪ್ರಸಕ್ತ ವರ್ಷ ಉತ್ತರ ಕರ್ನಾಟಕದಲ್ಲಿ ಬೆಳೆ ನಷ್ಟಗೊಂಡ ಪರಿಣಾಮ ಮೆಣಸಿನಕಾಯಿ ಸತತವಾಗಿ ಆರು ಬಾರಿ ಲಕ್ಷ ಚೀಲ ದಾಟಿದ್ದು, ಏಳನೇ ಬಾರಿಗೆ 2 ಲಕ್ಷ ಚೀಲ ಆವಕ ದಾಖಲೆಯಾಗುವ ಮೂಲಕ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಆವಕಗೊಂಡ ದಿನವಾಗಿದೆ. ಈ ವರ್ಷದ ಫೆಬ್ರವರಿ ಮೊದಲ ವಾರದವರೆಗೂ ತುಸು ಕಡಿಮೆ ಆವಕಗೊಂಡಿದ್ದು, ವ್ಯಾಪಾರಸ್ಥರು ಹಾಗೂ ಮಾರುಕಟ್ಟೆ ಶುಲ್ಕ ವಸೂಲಿ ವಿಭಾಗ ಆತಂಕದಲ್ಲಿತ್ತು. ಆದರೆ, ವಾರದಿಂದ ವಾರಕ್ಕೆ ಆವಕ ಏರಿಕೆಯಾಗುವ ಮೂಲಕ ಹಿಂದಿನ ವೈಭವನ್ನು ಮೆರೆದಿದೆ.
19 ರಂದು ಮಾರುಕಟ್ಟೆಗೆ ರಜೆ : ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯ ಆಡಳಿತ ಮಂಡಳಿ ಹಾಗೂ ವರ್ತಕರ ಸಂಘದ ಸಭೆಯನ್ನು ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ ಕರಬಸಪ್ಪ ನಾಯ್ಕರ, ಕಾರ್ಯದರ್ಶಿ ಸಿದ್ದು ನ್ಯಾಮಗೌಡ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ, ರಾಜು ಮೋರಗೇರಿ ನೇತೃತ್ವದಲ್ಲಿ ಸಭೆ ನಡೆಯಿತು. ಬಳಿಕ ಮೆಣಸಿನಕಾಯಿ ಲಿಪ್ಲಿಂಗ್ ಮಾಡುವುದು ಹಾಗೂ ಕರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಫೆ. 19ರಂದು ಬ್ಯಾಡಗಿ ಮಾರುಕಟ್ಟೆಗೆ ರಜೆ ಘೊಷಣೆ ನಿರ್ಧಾರ ಮಾಡಲಾಯಿತು. ಹೀಗಾಗಿ ರೈತರು ಆ ದಿನ ಮಾರುಕಟ್ಟೆಗೆ ಯಾವುದೇ ಮೆಣಸಿನಕಾಯಿ ಚೀಲಗಳನ್ನು ತರಬಾರದೆಂದು ಮನವಿ ಮಾಡಿದ್ದಾರೆ.
ಇಂದಿನ ದರ:ಬ್ಯಾಡಗಿ ಕಡ್ಡಿ 2.169 ರಿಂದ 25.089, ಡಬ್ಬಿ 3.009 ರಿಂದ 31.045, ಗುಂಟೂರು 765 ರಿಂದ 11.089 ರೂ.ದರದಲ್ಲಿ ಮಾರಾಟವಾಗಿದೆ. ಒಟ್ಟು ಲಾಟ್ ಸಂಖ್ಯೆ 16.436, ದಲಾಲರ ಸಂಖ್ಯೆ 246, ಖರೀದಾರರ ಸಂಖ್ಯೆ 333, ನೋ ಬಿಡ್ ಲಾಟ್ 256, ಒಟ್ಟು ಆವಕಗೊಂಡ ಚೀಲಗಳು 216808 ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಹಿಂದಿನ ವರ್ಷದ ಮಾರ್ಚ್ನಲ್ಲಿ 15.14 ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು. ಈವರೆಗೂ 15.25 ಕೋಟಿ ರೂ.ದಾಟಿ, ಹಿಂದಿನ ವರ್ಷಕ್ಕಿಂತಲೂ 11 ಲಕ್ಷ ರೂ. ಶುಲ್ಕ ಹೆಚ್ಚಿದೆ. ಪ್ರಸಕ್ತ ಸಾಲಿನಲ್ಲಿ 16.30 ಕೋಟಿ ರೂ. ಶುಲ್ಕದ ಗುರಿ ತಲುಪಬಹುದಾಗಿದೆ. ಮಾ. 16 ರಂದು ಒಂದೇ ದಿನದಲ್ಲಿ ಒಂದು ಕೋಟಿ ರೂ. ಶುಲ್ಕ ಸಂಗ್ರಹ ದಾಟಿದೆ. ಮಾರುಕಟ್ಟೆ ವ್ಯಾಪ್ತಿಯಲ್ಲಿ ಹೋಟೆಲ್, ತಿಂಡಿ ತಿನಿಸು ಮಾರಾಟ ಸ್ಥಗಿತಗೊಳಿಸಲಾಗಿದೆ. ಸ್ವಚ್ಛತೆಗೆ ಧ್ವನಿವರ್ಧಕಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿದ್ದು, ರೈತರ ಸಲುವಾಗಿ ಇಂದಿನಿಂದ ಶುದ್ಧ ನೀರನ್ನು ಉಚಿತವಾಗಿ ಪೂರೈಸಲಾಗುತ್ತಿದೆ.| ಪ್ರಭು ದೊಡ್ಡಮನಿ, ಲೆಕ್ಕಪತ್ರ ವಿಭಾಗ ಮುಖ್ಯಸ್ಥ