ಬ್ಯಾಡಗಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಎಪಿಎಂಸಿಯಲ್ಲಿ ಇ-ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದ್ದ ಮೆಣಸಿನಕಾಯಿ ವ್ಯಾಪಾರ ವಾರದಿಂದ ಪುನಃ ಆರಂಭವಾಗಿದ್ದು, ಆವಕದಲ್ಲಿ ಏರಿಕೆ ಕಂಡುಬರುತ್ತಿದೆ.
ಮೇ 18ರಿಂದ ಪುನರಾರಂಭವಾದ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 50, 776 ಚೀಲ ಆವಕವಾಗಿದೆ. ಈವರೆಗೆ ಒಟ್ಟು 1 ಲಕ್ಷದ 80 ಸಾವಿರ ಚೀಲಗಳು ಆವಕವಾಗಿದ್ದು, ಮಾರುಕಟ್ಟೆಗೆ 80 ಲಕ್ಷ ರೂ. ಶುಲ್ಕ ಜಮೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ದರದಲ್ಲಿ ಸ್ಥಿರತೆ: ಲಾಕ್ಡೌನ್ನಿಂದ ಸ್ಥಳೀಯ ವ್ಯಾಪಾರಸ್ಥರು ಸೇರಿ ಕೋಲ್ಡ್ ಸ್ಟೋರೇಜ್ ಮಾಲೀಕರು, ಖರೀದಿದಾರರು ತೀವ್ರ ತೊಂದರೆ ಅನುಭವಿಸಿದ್ದರು. ಬಳಿಕ ಎರಡು ತಿಂಗಳು ಸರ್ಕಾರದ ನಿಯಮ ಪಾಲಿಸಬೇಕಾದ ಹಿನ್ನೆಲೆಯಲ್ಲಿ ರೈತರು ಬೆಳೆಯನ್ನು ಕೋಲ್ಡ್ ಸ್ಟೋರೇಜ್ನಲ್ಲಿ ತಂದಿಟ್ಟಿದ್ದರು. ಈಗ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ರೈತರ ಚೀಲಗಳನ್ನು ಟೆಂಡರ್ ಹಾಕಲಾಗುತ್ತಿದೆ. ಮುಖ್ಯವಾಗಿ ಖರೀದಿದಾರರು ಈಗಲೂ ತುಸು ಸಮಸ್ಯೆಯಲ್ಲಿದ್ದರೂ, ರೈತರಿಗೆ ದರ ನೀಡುವಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ರೈತರಲ್ಲಿ ದರ ಕುಸಿತದ ಅನುಮಾನ ದೂರವಾಗಿ, ಸಂತಸ ಮೂಡಿದೆ. ಬ್ಯಾಡಗಿ ಕಡ್ಡಿ 2 ಸಾವಿರದಿಂದ 25 ಸಾವಿರ ರೂ., ಡಬ್ಬಿ 3ರಿಂದ 30 ಸಾವಿರ ರೂ. ಹಾಗೂ ಗುಂಟೂರು 800ರಿಂದ 11 ಸಾವಿರ ರೂ. ದರದಲ್ಲಿ ಮಾರಾಟವಾಗುತ್ತಿದೆ.
ಕೋವಿಡ್ ನಿಯಮ ಪಾಲನೆ: ಎಪಿಎಂಸಿ ಆಡಳಿತ ಮಂಡಳಿ ಸೂಚಿಸಿದ ನಿಯಮಗಳನ್ನು ಎಲ್ಲ ದಲ್ಲಾಳಿ ಅಂಗಡಿಯವರು, ರೈತರು, ಖರೀದಿದಾರರು, ಹಮಾಲರು ಪಾಲಿಸುತ್ತಿದ್ದಾರೆ. ದೂರದ ಪ್ರದೇಶಗಳಿಂದ ಆಗಮಿಸುವ ಪ್ರತಿಯೊಬ್ಬರೂ ಮಾರುಕಟ್ಟೆಗೆ ಬರುವ ಮುನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಕೊಂಡು ಬರುತ್ತಿದ್ದಾರೆ. ಅಂಗಡಿಗಳ ಎದುರು ಸೋಪು, ಸ್ಯಾನಿಟೈಸರ್ ಇಡಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯುವುದು ನಡೆದಿದೆ. ಟೆಂಡರ್ ನಡೆಯುವ ಸೋಮವಾರ, ಗುರುವಾರ ಎಪಿಎಂಸಿ ಸಿಬ್ಬಂದಿ ಪ್ರಾಂಗಣದಲ್ಲಿ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇಂದಿನ ದರ: ಕಡ್ಡಿಮೆಣಸಿನಕಾಯಿ 1889ರಿಂದ 25009 ರೂ., ಡಬ್ಬಿ 2810 ರಿಂದ 26669 ರೂ. ಹಾಗೂ ಗುಂಟೂರು 800 ರಿಂದ 10509 ಸಾವಿರ ರೂ. ದರದಲ್ಲಿ ಮಾರಾಟವಾಗಿವೆ.